ಸಾಂಕ್ರಾಮಿಕ ರೋಗಗಳು ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲ

Update: 2019-07-23 18:54 GMT

ಬೆಂಗಳೂರು, ಜು.23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಪಾಲಿಕೆ ಅಧಿಕಾರಗಳು ವಿಫಲವಾಗಿದ್ದಾರೆ.

ಡೆಂಗ್, ಮಲೇರಿಯಾ, ಚಿಕನ್‌ಗುನ್ಯಾ ಸೇರಿದಂತೆ ಮತ್ತಿತರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ಪಾಲಿಕೆಯು ಬೇಜವಾಬ್ದಾರಿತನ ತೋರಿದೆ. ಹೀಗಾಗಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಮಲೇರಿಯಾ, ಆನೆಕಾಲು, ಡೆಂಗ್, ಚಿಕೂನ್‌ಗುನ್ಯಾ, ಮೆದುಳು ಜ್ವರ ರೋಗದ ನಿಯಂತ್ರಣ ಚಟುವಟಿಕೆಗಳನ್ನು ರಾಜ್ಯದಾದ್ಯಂತ ಅನುಷ್ಠಾನ ಮಾಡಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅದನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದು, ರೋಗದ ನಿಯಂತ್ರಣಕ್ಕೆ ಸಂಬಂಧಿಸಿದ ವರದಿಯನ್ನೂ ಪಾಲಿಕೆ ಸಲ್ಲಿಸಿಲ್ಲ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ದೂರಿದ್ದಾರೆ.

ರಾಜ್ಯದಲ್ಲಿ ಮುಂದಿನ 6 ವರ್ಷಗಳಲ್ಲಿ ಮಲೆರಿಯಾ ಮುಕ್ತ ರಾಜ್ಯ ಮಾಡಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ. ವಾರ್ಷಿಕ ಪರಾವಲಂಬಿ ಸೂಚ್ಯಂಕದ ಆಧಾರದ ಮೇಲೆ ರಾಜ್ಯದ ಎಲ್ಲ ಗ್ರಾಮಗಳನ್ನೂ ಶ್ರೇಣೀಕರಣ ಮಾಡಿ, ಸೂಕ್ತ ಉಪಕ್ರಮಗಳನ್ನು ನಿಗದಿ ಮಾಡಲಾಗಿದೆ. ಅದೇ ರೀತಿ ಪಾಲಿಕೆಯ ಎಲ್ಲ ವಾರ್ಡ್‌ಗಳನ್ನು ವರ್ಗೀಕರಣ ಮಾಡಿ, ಮಾರ್ಗದರ್ಶಿ ಚೌಕಟ್ಟು ರೂಪಿಸಬೇಕಿದೆ. ಆದರೆ, ಪಾಲಿಕೆಯು ಪಾಲನಾ ವರದಿ ಇದುವರೆಗೂ ಸಲ್ಲಿಸದೇ ನಿರ್ಲಕ್ಷ ವಹಿಸಿದೆ. ಇದರಿಂದ ಉಳಿದ ಜಿಲ್ಲೆಗಳಲ್ಲಿ ರೋಗಗಳು ನಿಯಂತ್ರಣಕ್ಕೆ ಬಂದರೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ರಾಜ್ಯದಲ್ಲಿ ನಿಗದಿತ ಯಶಸ್ಸು ಸಾಧಿಸಲು ಸಾಧ್ಯವಾಗತ್ತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಅವೈಜ್ಞಾನಿಕ ನಗರೀಕರಣ, ನೀರಿನ ಪೂರೈಕೆಯಲ್ಲಿನ ವ್ಯತ್ಯಯ ಡೆಂಗ್ ಹಾವಳಿಗೆ ಕಾರಣವಾಗಿದೆ ಎಂದು ಹೇಳಿರುವ ಅವರು, ಎಲ್ಲ ವಾರ್ಡ್‌ಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಆರೋಗ್ಯ, ಜ್ವರ ಸಮೀಕ್ಷೆ, ಶಂಕಿತ ಪ್ರಕರಣಗಳ ಮಾದರಿ ಸಂಗ್ರಹ, ಧೂಮೀಕರಣ ಸೇರಿದಂತೆ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು. ಖಚಿತ ಪ್ರಕರಣಗಳು ಕಂಡ ಕೂಡಲೇ ಅಲ್ಲಿಗೆ ಭೇಟಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪ್ರತಿದಿನ ವರದಿ ಸಲ್ಲಿಸಬೇಕು. ಆದರೆ, ಅದನ್ನು ಪಾಲಿಕೆ ನಿರ್ವಹಿಸುತ್ತಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News