ಹಾಸನ: ಹಿಂಸೆಗೆ ತಿರುಗಿದ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ- ಪೊಲೀಸರು, ಪತ್ರಕರ್ತರ ಮೇಲೆ ಕಲ್ಲು ತೂರಾಟ

Update: 2019-07-24 15:46 GMT

ಹಾಸನ, ಜು.24: ನಗರದ ಹೊರವಲಯ ಹನುಮಂತಪುರ ಬಳಿ ಇರುವ ಹಿಮ್ಮತ್ ಸಿಂಗ್ ಕಾ ಬಟ್ಟೆ ಕಾರ್ಖಾನೆಯಲ್ಲಿ ಅಸ್ಸಾಂ, ಬಿಹಾರಿ ಮೂಲದ ಕಾರ್ಮಿಕರು ಬುಧವಾರ ಧಿಡೀರ್ ಪ್ರತಿಭಟನೆ ನಡೆಸಿ, ಏಕಾಏಕಿ ಪೊಲೀಸರ, ಪತ್ರಕರ್ತರ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೇ 20ಕ್ಕೂ ಹೆಚ್ಚು ವಾಹನಗಳನ್ನು ಜಖಂ ಮಾಡಿದ್ದು, ಘಟನೆ ಹಿನ್ನಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್ ಮಾಡಿರುವ ಘಟನೆ ನಡೆದಿದೆ.  

ಹಿಮ್ಮತ್ ಸಿಂಗ್‍ಕಾ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಯುಪಿಯ ಅಸ್ಸಾಂ, ಬಿಹಾರಿ ಮೂಲದ 15,00ಕ್ಕೂ ಹೆಚ್ಚು ಕಾರ್ಮಿಕರು ನಮಗೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಬುಧವಾರ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಹೊರ ರಾಜ್ಯದ ಯುವಕರನ್ನು ಕಾರ್ಖಾನೆ ಕೆಲಸಕ್ಕೆ ಕರೆತಂದು ಅವರಿಗೆ ಕನಿಷ್ಠ ಸೌಲಭ್ಯವನ್ನೂ ನೀಡದೆ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಇಬ್ಬರು ಕಾರ್ಮಿಕರ ಮೇಲೆ ಕಾರ್ಖಾನೆಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಂದು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಾಳಿ ರೊಚ್ಚಿಗೆದ್ದ ಕಾರ್ಮಿಕರು ಕಾರ್ಖಾನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ತಡೆಯಲು ಬಂದ ಪೊಲೀಸರ ಮೇಲೂ ಕೂಡ ಕಲ್ಲು ತೂರಾಟ ಮುಂದುವರೆಸಿದರು. ನಂತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೂ ಬಗ್ಗದ ಪ್ರತಿಭಟನಾಕಾರರು, ತೀವ್ರ ಸ್ವರೂಪದಲ್ಲಿ ಕಲ್ಲು ತೂರಾಟ ಮಾಡಿದ್ದರಿಂದ 10 ಮಂದಿ ಪೊಲೀಸರು ತಮ್ಮ ಪೊಲೀಸ್ ವಾಹನದಲ್ಲಿ ಬಂದು ಕುಳಿತರು. ಈ ವೇಳೆ ಕಾರ್ಮಿಕರು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದು, ಬಳಿಕ ವಾಹನವನ್ನು ಕೆಳಕ್ಕೆ ಉರುಳಿಸಿದರು. ಉಳಿದ ಎಲ್ಲಾ ವಾಹನಗಳನ್ನು ಕಲ್ಲಿನಿಂದ ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. 

ಹಿಮ್ಮತ್ ಸಿಂಗ್‍ಕಾ ಬಟ್ಟೆ ಕಾರ್ಖಾನೆಯಲ್ಲಿ ಯುಪಿ, ಅಸ್ಸಾಂ, ಬಿಹಾರಿ ಮೂಲದವರು ನಡೆಸಿದ ಹಿಂಸಾಚಾರವನ್ನು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಜೆ.ಎಸ್.ಸುರೇಶ್ ಹಾಗೂ ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್ ಗೌಡ ಅವರು ಘಟನೆ ಸ್ಥಳಕ್ಕೆ ಆಗಮಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲ್ನೋಟಕ್ಕೆ ಇಂತಹ ಘಟನೆ ನಡೆಯಲು ಕಾರ್ಖಾನೆ ಉಸ್ತುವಾರಿ ವಹಿಸಿಕೊಂಡಿರುವವರ ನಿರ್ಲಕ್ಷ್ಯವೇ ಕಾರಣ. ಈಗಾಗಲೇ ಈ ಕುರಿತು ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡಿದ್ದೇವೆ. ಶಾಂತಿಯುತವಾಗಿ ಮಾಡಬೇಕಾಗಿದ್ದ ಪ್ರತಿಭಟನೆಯು ಹಿಂಸಾರೂಪ ತಾಳಿದೆ. ಸದ್ಯದ ಪರಿಸ್ಥಿತಿ ಶಾಂತವಾಗಿದ್ದು, ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಮ್ಮತ್‍ಸಿಂಗ್‍ಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಿಹಾರಿ, ಅಸ್ಸಾಂ ಮೂಲಕ ಕಾರ್ಮಿಕರು ನಡೆಸಿದ ಕಲ್ಲು ತೂರಾಟದಲ್ಲಿ 10 ಮಂದಿ ಪೊಲೀಸರಿಗೆ ಗಾಯವಾಗಿದೆ. ಇವರಲ್ಲಿ ಇಬ್ಬರಿಗೆ ಗಂಭೀರ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೂರ್ತಿ, ತೀವ್ರ ಗಾಯಗಳಾಗಿರುವ ಕೃಷ್ಣೇಗೌಡ, ದೇವರಾಜ್, ಸೋಮಶೇಖರಪ್ಪ, ಜಗದೀಶ್, ಲೋಕೇಶ್, ವಿಶ್ವನಾಥ್, ನಾಗರಾಜ್, ಕೃಷ್ಣಶೆಟ್ಟಿ ಇತರರೆ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಕಾರ್ಖಾನೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News