ಕಾಫಿ ಬೆಳೆಗಾರರ ಸಮಸ್ಯೆ ಅರಿಯಲು ವಿಶೇಷ ಕಾರ್ಯಪಡೆ ರಚನೆ: ಸಚಿವ ಪಿಯೂಷ್ ಗೋಯಲ್

Update: 2019-07-24 11:26 GMT

ಮಡಿಕೇರಿ: ಕಾಫಿ ಬೆಳೆಗಾರರ ಸಮಸ್ಯೆಯನ್ನು ಅಧ್ಯಯನ ನಡೆಸಿ ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್  ವಿಶೇಷ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಬೆಳೆಗಾರರ ಸಂಘ ಮತ್ತು ಉಪಾಸಿ ಸೇರಿದಂತೆ ವಿವಿಧ ಕಾಫಿ ಬೆಳೆಗಾರ ಸಂಘಟನೆ ಗಳ ಪ್ರಮುಖರು ಕೇಂದ್ರ  ವಾಣಿಜ್ಯ  ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಸಭೆ ನಡೆಸಿ ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ನಿವಾರಣೆ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಈ ಸಂದರ್ಭ ಸಚಿವ ಪಿಯೂಷ್ ಗೋಯಲ್, ಕಾಫಿ ಬೆಳೆಗಾರರ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಲು ಕೇಂದ್ರದ ವಾಣಿಜ್ಯ ಇಲಾಖೆಯ ತೋಟಗಾರಿಕಾ ವಿಭಾಗದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಮತ್ತು ತೋಟಗಾರಿಕಾ ವಿಭಾಗದ ನಿರ್ದೇಶಕ  ಪಿ.ಶರವಣನ್  ನೇತೃತ್ವದಲ್ಲಿ ವಿಶೇಷ  ಕಾರ್ಯ ಪಡೆಯ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದರು.

ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಕೇಂದ್ರ ಸರಕಾರವು ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಯಾವ ರೀತಿಯಲ್ಲಿ ಪರಿಹಾರ ಮಾಡಬಹುದು ಎಂದು ಸ್ಪಷ್ಟ ನಿರ್ಧಾರ ಕೈಗೊಂಡಿರುವುದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥ ಮಲ್ಲೇಶ್ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News