ಒಬ್ಬ ವ್ಯಕ್ತಿಯನ್ನು ಉಗ್ರನೆಂದು ಘೋಷಿಸುವ ವಿಧೇಯಕ ಲೋಕಸಭೆಯಲ್ಲಿ ಅನುಮೋದನೆ

Update: 2019-07-24 11:29 GMT

ಹೊಸದಿಲ್ಲಿ, ಜು.24:  ಕಾನೂನುಬಾಹಿರ ಚಟುವಟಿಕೆಗಳ ತಡೆ (ತಿದ್ದುಪಡಿ) ವಿಧೇಯಕಕ್ಕೆ ಲೋಕಸಭೆ ಅನುಮೋದನೆ ನೀಡಿದ್ದು, ಈ ತಿದ್ದುಪಡಿಯನ್ವಯ ಉಗ್ರ ಸಂಪರ್ಕ ಹೊಂದಿದ ಶಂಕಿತ ವ್ಯಕ್ತಿಗಳನ್ನು ಸರಕಾರ ಉಗ್ರವಾದಿಗಳು ಎಂದು ಘೋಷಿಸುವ ಅಧಿಕಾರ ಹೊಂದುವುದು ಸಾಕಷ್ಟು ವಿವಾದಕ್ಕಿಡಾಗಿದೆ.

ಆದರೆ ಕಾನೂನಿನಲ್ಲಿ ತರಲಾಗಿರುವ ತಿದ್ದುಪಡಿಗಳನ್ನು ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. “ಒಬ್ಬ ವ್ಯಕ್ತಿಯನ್ನು ಉಗ್ರವಾದಿ ಎಂದು ಘೋಷಿಸುವ ಕಾನೂನು ಅಗತ್ಯವಿದೆ. ವಿಶ್ವಸಂಸ್ಥೆ, ಅಮೆರಿಕಾ, ಪಾಕಿಸ್ತಾನ, ಚೀನ, ಇಸ್ರೇಲ್, ಹೀಗೆ ಎಲ್ಲರಲ್ಲೂ ಇದಕ್ಕೊಂದು ಪ್ರಕ್ರಿಯೆಯಿದೆ'' ಎಂದರು.

“ಒಂದು ಉಗ್ರ ಸಂಘಟನೆಯನ್ನು ನಿಷೇಧಿಸಿದರೆ ಉಗ್ರರು ಸುಲಭವಾಗಿ ಬೇರೊಂದು ಸಂಘಟನೆ ಸ್ಥಾಪಿಸಬಹುದಾಗಿದೆ'' ಎಂದು ಶಾ ಹೇಳಿದರು.

ಸರಕಾರವನ್ನು ಪ್ರಶ್ನಿಸಿದ ಯಾರನ್ನೇ ಆದರೂ ದೇಶ ವಿರೋದಿ ಎಂದು ಕರೆಯಲಾಗುತ್ತದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಶಾ,  ನೈಜ ಸಾಮಾಜಿಕ ಹೋರಾಟಗಾರರಿಗೆ ಯಾರೂ ಕಿರುಕುಳ ನೀಡುವುದಿಲ್ಲ ಎಂದರು. “ಒಳ್ಳೆಯ ಕೆಲಸ ಮಾಡುವ ಹಲವಾರು ಸಾಮಾಜಿಕ ಕಾರ್ಯಕರ್ತರಿದ್ದಾರೆ. ಆದರೆ ನಾವು ನಗರದ ನಕ್ಸಲರನ್ನು ಸದೆ ಬಡಿಯುತ್ತೇವೆ'' ಎಂದು ಹೇಳಿದರು.

ಈ ಕಾನೂನಿನ ಬಗ್ಗೆ ಕಾಂಗ್ರೆಸ್ ಇಬ್ಬಗೆ ನೀತಿ ಹೊಂದಿದೆ ಎಂದ ಅವರು ``ಕಾನೂನನ್ನು ಕಠಿಣಗೊಳಿಸಿದ್ದು ಯಾರು ? ನೀವು ಅಧಿಕಾರದಲ್ಲಿದ್ದಾಗ ಆಗಿದ್ದು. ಆಗ ನೀವು ಮಾಡಿದ್ದು ಸರಿ ಈಗ ನಾನು ಮಾಡುವುದೂ ಸರಿ'' ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News