ಮುಖ್ಯಮಂತ್ರಿಯಾಗಿ ಶೀಘ್ರವೇ ಯಡಿಯೂರಪ್ಪ ಅಧಿಕಾರ ಸ್ವೀಕಾರ: ಬಸವರಾಜ ಬೊಮ್ಮಾಯಿ

Update: 2019-07-24 15:32 GMT

ಬೆಂಗಳೂರು, ಜು.24: ಬಿಜೆಪಿ ಸರಕಾರ ರಚನೆಗೆ ಸಕಲ ಸಿದ್ಧತೆ ನಡೆಸುತ್ತಿದ್ದು, ಶುಕ್ರವಾರ ಅಥವಾ ಶನಿವಾರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಬೇಕು. ಇನ್ನು ಎರಡು-ಮೂರು ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರವಾಗಿ ಆಡಳಿತ ನಡೆಸಿದ್ದರು. ಈ ಬಾರಿಯೂ ಜನತೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆಂದು ಅವರು ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೂ ಬಿಜೆಪಿಗೂ ಯಾವುದೆ ಸಂಬಂಧವಿಲ್ಲವೆಂದು ಸದನದಲ್ಲಿ ಸ್ಪಷ್ಟ ಪಡಿಸಿದ್ದೇವೆಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್‌ನೊಂದಿಗಿದ್ದ ಅಪವಿತ್ರ ಮೈತ್ರಿಯಿಂದಾಗಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಪತನವಾಗಿದೆ. ಕಾಂಗ್ರೆಸ್-ಜೆಡಿಎಸ್‌ನ ಒಳಜಗಳದಿಂದಾಗಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರಬಹುದು. ತಮ್ಮ ತಪ್ಪುಗಳನ್ನು ಮುಚ್ಚಿ ಹಾಕುವುದಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆಂದು ತಿಳಿಸಿದರು.

ಬಿಜೆಪಿ ಸರಕಾರ ರಚನೆಗೆ ಎರಡು ದಿನ ಆಗಬಹುದು. ದೆಹಲಿ ವರಿಷ್ಠರ ಸೂಚನೆಗೆ ಕಾಯುತ್ತಿದ್ದೇವೆ. ರಾಜ್ಯ ಜನತೆಗೆ ಪಾರದರ್ಶಕವಾಗಿ, ಸುಭದ್ರವಾದ ಸರಕಾರವನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಿದ್ದೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News