ದಿಲ್ಲಿಗೆ ಬರದಂತೆ ಬಿಎಸ್‌ವೈಗೆ ಹೈಕಮಾಂಡ್ ಸೂಚನೆ

Update: 2019-07-25 13:51 GMT

ಬೆಂಗಳೂರು, ಜು.25: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸದಿಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. ಮಾಸಾಂತ್ಯಕ್ಕೆ ಸರಕಾರ ರಚನೆಯಾಗದಿದ್ದರೆ, ರಾಜ್ಯದಲ್ಲಿ ಬಹುತೇಕ ರಾಷ್ಟ್ರಪತಿ ಆಡಳಿತ ಜಾರಿಗೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ, ಮುಂದಿನ ಆರು ತಿಂಗಳಲ್ಲಿ ಸಹಜವಾಗಿಯೇ ಸಾರ್ವತ್ರಿಕ ಚುನಾವಣೆ ನಡೆದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಹಾಕಿದೆ.

ಈ ಆರು ತಿಂಗಳ ಅವಧಿಯಲ್ಲಿ ಯಡಿಯೂರಪ್ಪ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ, ಹೊಸ ನಾಯಕನ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಸರಕಾರ ರಚನೆ ಮಾಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪರಿಗೆ ವಯಸ್ಸು ಅಡ್ಡಿಯಾಗಲಿದೆಯೇ?: 

ಬಿಜೆಪಿ ಹೈಕಮಾಂಡ್ 75 ವರ್ಷ ದಾಟಿರುವವರಿಗೆ ಮುಖ್ಯಮಂತ್ರಿ, ಸಚಿವ ಸ್ಥಾನ ನೀಡದಿರಲು ಈ ಹಿಂದೆ ತೀರ್ಮಾನ ಕೈಗೊಂಡಿದೆ. ಅದರಂತೆ, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಆನಂದಿಬೇನ್ ಪಟೇಲ್ 75 ವರ್ಷ ದಾಟಿದ್ದರಿಂದ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

76 ವರ್ಷದ ಯಡಿಯೂರಪ್ಪ ರಾಜ್ಯ ಬಿಜೆಪಿ ಮಟ್ಟಿಗೆ ಈಗಲೂ ಪ್ರಶ್ನಾತೀತ ನಾಯಕ, ಅವರನ್ನು ಅಧಿಕಾರದಿಂದ ದೂರವಿಡುವುದು ಎಷ್ಟರಮಟ್ಟಿಗೆ ಸರಿ ಎಂಬುದು ಯಡಿಯೂರಪ್ಪ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಈಗಲೂ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದು, ಬಹುತೇಕ ಎಲ್ಲ ಶಾಸಕರು ಅವರ ನಿಷ್ಠರಾಗಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಧನವಿನಿಯೋಗ ಮಸೂದೆ ಇದೇ ತಿಂಗಳ 31ರೊಳಗಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಬೇಕಿದೆ. ಒಂದು ವೇಳೆ ಧನ ವಿನಿಯೋಗ ಮಸೂದೆ ಅಂಗೀಕಾರವಾಗದಿದ್ದಲ್ಲಿ, ಅಭಿವೃದ್ಧಿ ಕಾರ್ಯಗಳು ಹಾಗೂ ಸರಕಾರಿ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News