ಮೂವರು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್

Update: 2019-07-25 16:02 GMT
ಆರ್ ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ

ಬೆಂಗಳೂರು, ಜು.25: ಸಂವಿಧಾನ 10ನೆ ಅನುಸೂಚಿ(ಶೆಡ್ಯೂಲ್ಡ್) ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಶಂಕರ್, ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿಯನ್ನು 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ತೀರ್ಪು ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕ ಆರ್.ಶಂಕರ್ 2018ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ದ ಆಟೋ ರಿಕ್ಷಾ ಚಿನ್ನೆ ಮೇಲೆ ಆರಸಿ ಬಂದಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದರು ಎಂದರು.

ಜೂ.14ರಂದು ಶಂಕರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಮ್ಮ ಕಚೇರಿಗೆ ಪತ್ರ ಬರೆದು, ಶಂಕರ್ ಕೆಪಿಜೆಪಿ ಪಕ್ಷದಿಂದ ಒಬ್ಬರೇ ಶಾಸಕರಾಗಿ ಆಯ್ಕೆಯಾಗಿರುವ ಕಾರಣ, ಶೆಡ್ಯೂಲ್ಡ್ 10ರಲ್ಲಿ ನಿರೂಪಿಸಿರುವಂತೆ ತನ್ನ ಪಕ್ಷವನ್ನು ಕಾಂಗ್ರೆಸ್‌ದಲ್ಲಿ ವಿಲೀನಗೊಳಿಸಿದ್ದೇನೆ. ನೀವು ಮುಂದಿನ ಕ್ರಮ ಜರುಗಿಸಬಹುದು ಎಂದು ಪತ್ರ ಬರೆದಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.

ಅಲ್ಲದೆ, ಸಿದ್ದರಾಮಯ್ಯನವರು ಸಹ ಕೆಪಿಜೆಪಿ ಶಾಸಕ ಶಂಕರ್‌ರನ್ನು ನಮ್ಮ ಪಕ್ಷದಲ್ಲಿ ವಿಲೀನಗೊಳಿಸಿದ್ದೇವೆ ಎಂದು ಪತ್ರ ಬರೆದಿದಾರೆ. ಜೂ.25ರಂದು ವಿಧಾನಸಭೆ ಕಾರ್ಯದರ್ಶಿಗೆ ಶಂಕರ್ ಅವರನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸಿ, ಅವರಿಗೆ ಕಾಂಗ್ರೆಸ್ ಸದಸ್ಯರ ಸಾಲಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದೆ ಎಂದು ಅವರು ಹೇಳಿದರು.

ಜುಲೈ 8ರಂದು ಶಂಕರ್ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ, ಸರಕಾರಕ್ಕೆ ನೀಡುತ್ತಿರುವ ಬೆಂಬಲ ಹಿಂಪಡೆಯುತ್ತಿದ್ದೇನೆ. ಅಲ್ಲದೆ, ಬಿಜೆಪಿ ಸರಕಾರ ರಚಿಸಲು ಮುಂದಾದರೆ ಅವರಿಗೆ ನಿಸ್ಸಂದೇಹವಾಗಿ ಬೆಂಬಲ ನೀಡುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ. ಆ ಪತ್ರವನ್ನು ರಾಜ್ಯಪಾಲರು ನನಗೆ ಕಳುಹಿಸಿಕೊಟ್ಟಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದರು.

ಜು.16ರಂದು ಸಿದ್ದರಾಮಯ್ಯ ನನಗೆ ದೂರು ನೀಡಿ, ಶಂಕರ್ ತಮ್ಮ ಪಕ್ಷವನ್ನು ನಮ್ಮ ಪಕ್ಷದೊಂದಿಗೆ ವಿಲೀನ ಮಾಡಿ, ರಾಜ್ಯಪಾಲರಿಗೆ ಬಿಜೆಪಿ ಸರಕಾರ ರಚನೆ ಮಾಡಿದರೆ ಬೆಂಬಲ ನೀಡುವುದಾಗಿ ಪತ್ರ ನೀಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಸ್ಪೀಕರ್ ಹೇಳಿದರು.

ಜು.17ರಂದು ನಾನು ಶಂಕರ್‌ಗೆ ನೋಟಿಸ್ ನೀಡಿ, ಜು.23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೆವು. ಜು.22ರಂದು ನಮಗೆ ಇಮೇಲ್ ಮೂಲಕ ಉತ್ತರ ನೀಡಿರುವ ಶಂಕರ್ ನಾಲ್ಕು ವಾರ ಕಾಲಾವಕಾಶ ಕೋರಿದ್ದಾರೆ ಎಂದು ಅವರು ಹೇಳಿದರು.

ಸಂವಿಧಾನದ ಪ್ರಕಾರ 2018ರ ಮೇನಲ್ಲಿ ಅಸ್ತಿತ್ವಕ್ಕೆ ಬಂದ 15ನೇ ವಿಧಾನಸಭೆಯ ಅವಧಿಯು 2023ರವರೆಗೆ ಇದೆ. ಆದುದರಿಂದ, ಜು.25ರಿಂದ ಅನ್ವಯವಾಗುವಂತೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಆರ್.ಶಂಕರ್ ಅವರನ್ನು ಈ ವಿಧಾನಸಭೆಯ ಅವಧಿ ಮುಗಿಯುವರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುತ್ತಿದೆ ಎಂದು ರಮೇಶ್ ಕುಮಾರ್ ಹೇಳಿದರು.

ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫೆ.11ರಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಹಾಗೂ ಉಮೇಶ್ ಜಾಧವ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ಸಲ್ಲಿಸಿದ್ದರು. ಆನಂತರ ಉಮೇಶ್ ಜಾಧವ್ ಹಾಗೂ ಬಿ.ನಾಗೇಂದ್ರ ಹೆಸರನ್ನು ಕೈ ಬಿಡಲಾಗಿತ್ತು ಎಂದು ಅವರು ತಿಳಿಸಿದರು.

ಫೆ.14ರಂದು ನಾವು ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಈ ಶಾಸಕರಿಗೆ ನೋಟಿಸ್ ಜಾರಿ ನೀಡಿದೆವು. ಫೆ.20ರಂದು ಅವರು ನಮಗೆ ಉತ್ತರ ಕಳುಹಿಸಿಕೊಟ್ಟಿದ್ದಾರೆ. ಆನಂತರ, ಮಾ.7ರಂದು ಪುನಃ ನಾವು ಅವರಿಗೆ ನೋಟಿಸ್ ನೀಡಿದೆವು. ಜುಲೈ 6ರಂದು ಬಂದು ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಜು.8ರಂದು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಮತ್ತೊಮ್ಮೆ ಬಂದು ನಮ್ಮ ಬಳಿ ಇವರ ವಿರುದ್ಧ ಅರ್ಜಿ ಹಾಕಿದ್ದಾರೆ ಎಂದು ಸ್ಪೀಕರ್ ಹೇಳಿದರು.

ಜು.9ರಂದು ನಮ್ಮ ಮುಂದೆ ಹಾಜರಾಗುವಂತೆ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಸಂವಿಧಾನಕ್ಕೆ 35ನೇ ತಿದ್ದುಪಡಿ ಆದ ನಂತರ ಶಾಸಕರು ರಾಜೀನಾಮೆ ನೀಡಿದಾಗ ಸಭಾಧ್ಯಕ್ಷರು ರಾಜೀನಾಮೆ ಸ್ವಯಂಪ್ರೇರಿತವಾಗಿದೆಯೇ? ಸಹಜತೆಯಿಂದ ಕೂಡಿದೆಯೇ? ಎಂಬುದು ಮನವರಿಕೆಯಾಗದ ಹೊರತು, ರಾಜೀನಾಮೆ ಒಪ್ಪತಕ್ಕದಲ್ಲ ಎಂದು ತಿಳಿಸಿದೆ ಎಂದು ರಮೇಶ್ ಕುಮಾರ್ ಹೇಳಿದರು.

ಈ ಸರಕಾರ ನಾವು ಹೇಳಿದ ದಿನಾಂಕದಂದು ವಿಚಾರಣೆಗೆ ಹಾಜರಾಗಿಲ್ಲ, ಜು.11ರಂದು ಪ್ರೊಸಿಡಿಂಗ್ಸ್ ಆಗಿದೆ. ಅವರ ಪರ ವಕೀಲರು ಬಂದು ಮೆಮೊ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ನಮ್ಮ ಬಳಿ ನೇರವಾಗಿ ಬರಲಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.

ತಮಿಳುನಾಡಿನಲ್ಲಿ ಎಐಎಡಿಎಂಕೆ ಸದಸ್ಯರು ತಮ್ಮ ಪಕ್ಷದ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ಬೆಂಬಲ ಹಿಂಪಡೆದುಕೊಂಡಿದ್ದರು. ಆ ಪಕ್ಷದ ಮುಖ್ಯ ಸಚೇತಕರು ಸಭಾಧ್ಯಕ್ಷರಿಗೆ ದೂರು ನೀಡಿದ ಪರಿಣಾಮ 18 ಶಾಸಕರನ್ನು ಅನರ್ಹಗೊಳಿಸಲಾಗಿತ್ತು.

ರವಿನಾಯಕ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಶಾಸಕರಿಗೆ ಸಮಯ ಕೊಡುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ. ಆದರೂ, ನಾನು ಶಾಸಕರಿಗೆ ಸಮಯ ನೀಡಿದ್ದೇನೆ. ಇವರಿಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಅನರ್ಹತೆಯ ಅರ್ಜಿ ಮೊದಲು ಬಂದಿದೆ ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ನಮ್ಮ ಕಚೇರಿಗೆ ಬಂದು ರಾಜೀನಾಮೆ ನೀಡಿ, ಸುಪ್ರೀಂಕೋರ್ಟ್‌ಗೆ ಹೋಗಿ ಅಲ್ಪಮತದ ಸರಕಾರ ರಕ್ಷಿಸಲು ಸ್ಪೀಕರ್ ನಮಗೆ ಸಮಯ ನೀಡದೆ ತಮ್ಮ ಕಚೇರಿಯಿಂದ ಹೋಗಿದ್ದಾರೆ ಎಂದು ಹೇಳಿಕೆ ದಾಖಲಿಸುತ್ತಾರೆ. ನಮ್ಮ ಎದುರು ರಾಜೀನಾಮೆ ನೀಡಲು ಬಂದಾಗ ನಾವು ಹೇಳಿರುವುದು ಸತ್ಯಕ್ಕೆ ದೂರವಾದದ್ದು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಮಾಡಿ ಸುಪ್ರೀಂಕೋರ್ಟ್ ಕಳುಹಿಸಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದರು.

ಈ ಇಬ್ಬರು ಶಾಸಕರನ್ನು ಕೂಡ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ವಿಧಾನಸಭೆಯ ಅವಧಿ ಮುಗಿಯುವವರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ವಿಧಾನಸಭೆಯ ಅವಧಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಅವರು ಪುನಃ ಯಾವುದೇ ರೂಪದಲ್ಲಿ ಈ ಸದನಕ್ಕೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಕಾನೂನು ಹೇಳುತ್ತದೆ ಎಂದು ಅವರು ತಿಳಿಸಿದರು.

ಯಾವುದೇ ಆತುರ ಅಥವಾ ವಿಳಂಬ ಮಾಡದೆ ಸರಿಯಾದ ರೀತಿಯಲ್ಲಿ ಹಲವಾರು ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ಈ ತೀರ್ಪು ನೀಡುತ್ತಿದ್ದೇನೆ. ಇನ್ನುಳಿದಂತೆ ರಾಜೀನಾಮೆ ನೀಡಿರುವ ಶಾಸಕರ ಬಗ್ಗೆಯೂ ದೂರುಗಳು ಬಂದಿವೆ. ಅವರ ನಡವಳಿಕೆಗಳು, ನಮ್ಮ ಮುಂದಿನ ಘಟನೆಗಳು, ಇಂತಹ ಸನ್ನಿವೇಶದಲ್ಲಿ ಯಾರು ಯಾರು ಯಾವ ರೀತಿಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಮಧ್ಯಪ್ರದೇಶ, ತಮಿಳುನಾಡು, ರಾಜ್ಯಸಭೆ ಹಾಗೂ ಸುಪ್ರೀಂಕೋರ್ಟ್ ಆದೇಶಗಳು ಎಲ್ಲವನ್ನು ಮುಂದಿಟ್ಟುಕೊಂಡು ಕೆಲವೇ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ.
-ಕೆ.ಆರ್.ರಮೇಶ್ ಕುಮಾರ್, ಸ್ಪೀಕರ್ 

ತೀರ್ಪು ಕಾಯ್ದಿರಿಸಿರುವ ಪ್ರಕರಣ
ಎಚ್.ವಿಶ್ವನಾಥ್(ಹುಣಸೂರು), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣಗೌಡ(ಕೆ.ಆರ್.ಪೇಟೆ), ಎಸ್.ಟಿ.ಸೋಮಶೇಖರ್(ಯಶವಂತಪುರ), ಮುನಿರತ್ನ(ರಾಜರಾಜೇಶ್ವರಿ ನಗರ), ಭೈರತಿ ಬಸವರಾಜು(ಕೆ.ಆರ್.ಪುರ), ಬಿ.ಸಿ.ಪಾಟೀಲ್(ಹಿರೇಕೆರೂರು), ಎಂಟಿಬಿ ನಾಗರಾಜ್(ಹೊಸಕೋಟೆ), ಅರಬೈಲು ಶಿವರಾಮ್ ಹೆಬ್ಬಾರ್(ಯಲ್ಲಾಪುರ), ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಪ್ರತಾಪ್‌ಗೌಡ ಪಾಟೀಲ್(ಮಸ್ಕಿ), ರೋಷನ್ ಬೇಗ್(ಶಿವಾಜಿನಗರ), ಆನಂದ್‌ಸಿಂಗ್(ವಿಜಯನಗರ) ರಾಜೀನಾಮೆ ಪ್ರಕರಣದ ಕುರಿತು ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News