ಕಳಸ: ಆರೋಗ್ಯ ಕೇಂದ್ರಕ್ಕೆ ಜಿಪಂ ಅಧ್ಯಕ್ಷೆ ದಿಢೀರ್ ಭೇಟಿ

Update: 2019-07-25 18:45 GMT

ಚಿಕ್ಕಮಗಳೂರು, ಜು.25: ಜಿಲ್ಲೆಯ ಕಳಸ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುಜಾತಾ ಕೃಷ್ಣಪ್ಪ ದಿಢೀರ್ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳು, ವೈದರು, ಸಿಬ್ಬಂದಿ ಅಸಮರ್ಪಕ ಕಾರ್ಯವೈಖರಿ, ಖಾಯಂ ವೈದ್ಯಾಧಿಕಾರಿ ಇಲ್ಲದೇ ಸಾರ್ವಜನಿಕರು ಪರದಾಡುತ್ತಿರುವುದನ್ನು ಕಣ್ಣಾರೆ ಕಂಡು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. 

ಗುರುವಾರ ಬೆಳಗ್ಗೆ ಯಾವುದೇ ಮುನ್ಸೂಚನೆ ನೀಡದೇ ಕಳಸ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರನೆ ಆಗಮಿಸಿದ್ದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮೊದಲಿಗೆ ಆಸ್ಪತ್ರೆಯಲ್ಲಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲು ಆರಂಭಿಸಿದರು. ಈ ವೇಳೆ ಅವರು, ನರ್ಸ್‍ಗಳು, ಸಿಬ್ಬಂದಿ, ವೈದ್ಯರ ಹಾಜರಾತಿ, ಆಸ್ಪತ್ರೆಯಲ್ಲಿನ ಸ್ವಚ್ಛತೆ, ಔಷಧ ಸಂಗ್ರಹ ಕೊಠಡಿ, ವಾರ್ಡ್‍ಗಳನ್ನು ಪರಿಶೀಲಿಸಿದರು. ಈ ವೇಳೆ ಸಿಬ್ಬಂದಿ ಎಲ್ಲ ವ್ಯವಸ್ಥೆಗಳೂ ಸಮರ್ಪಕವಾಗಿರುವ ಬಗ್ಗೆ ಸಮಜಾಯಿಸಿ ನೀಡಲಾರಂಭಿಸಿದ್ದರು.

ಇದೇ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಬಳಿ ಆಗಮಿಸಿದ ಕೆಲ ಸಾರ್ವಜನಿಕರು ಜೆಡಿಎಸ್ ಮುಖಂಡ ರವಿ ರೈ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಗಮನಕ್ಕೆ ತಂದರು. ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ. ವಾರದಲ್ಲಿ ಎರಡು ದಿನಗಳಲ್ಲಿ ಮೂಡಿಗೆರೆ ತಾಲೂಕು ಆಸ್ಪತ್ರೆಯ ವೈದ್ಯರು ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಡಜನತೆ, ಕೂಲಿಕಾರ್ಮಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳಿದ್ದರೂ ಸಿಬ್ಬಂದಿ ಹಾಗೂ ವೈದ್ಯರ ಅಸಮರ್ಪಕ ಕಾರ್ಯ ವೈಖರಿಯಿಂದಾಗಿ ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ದುಪ್ಪಟ್ಟು ಹಣ ನೀಡಿ ಚಿಕಿತ್ಸೆ, ಔಷಧ ಪಡೆಯುತ್ತಿದ್ದಾರೆಂದು ದೂರಿದರು.

ಖಾಯಂ ವೈದ್ಯಾಧಿಕಾರಿ ಇಲ್ಲದೇ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ, ಬೆಳಗ್ಗೆ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯೇ ಇರುವುದಿಲ್ಲ. ಈ ವೇಳೆ ತುರ್ತು ಸಂದರ್ಭಗಳಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ದೂರದ ಮಂಗಳೂರು, ಹಾಸನ, ಚಿಕ್ಕಮಗಳೂರಿಗೆ ರೋಗಿಗಳನ್ನು ಕರೆದೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಕ್ಸ್ ರೇ ಯಂತ್ರವಿದ್ದರೂ ಪ್ರಯೋಜನವಿಲ್ಲ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಪ್ಪಟ್ಟು ಹಣ ನೀಡಿ ಎಕ್ಸ್ ರೇ ಮಾಡಿಸುತ್ತಿದ್ದಾರೆಂದು ಆರೋಪಿಸಿದರು.

ಆಸ್ಪತ್ರೆ ಅವ್ಯವಸ್ಥೆ ಹಾಗೂ ಸಾರ್ವಜನಿಕರ ದೂರು ಆಲಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಕೂಡಲೇ ಮೂಡಿಗೆರೆ ತಾಲೂಕು ವೈದ್ಯಾದಿಕಾರಿಗೆ ದೂರವಾಣಿ ಕರೆ ಮಾಡಿ, ಕಳಸ ಆಸ್ಪತ್ರೆಯಲ್ಲಿ ಭಾರೀ ಸಮಸ್ಯೆಗಳಿವೆ. ಜನರಿಗೆ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕೂಡಲೇ ಪಟ್ಟಣಕ್ಕೆ ಬರುವಂತೆ ತಿಳಿಸಿದರು. ಆದರೆ ವೈದ್ಯಾಧಿಕಾರಿ ಡಿಸಿ ಕಚೇರಿ ಸಭೆಯಲ್ಲಿದ್ದರಿಂದ ಮೂಡಿಗೆರೆ ತಾಲೂಕು ಕಚೇರಿಯಿಂದ ಬೇರೆ ವೈದ್ಯರನ್ನು ಕಳಿಹಿಸುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಅವರು, ಕಳಸ ಆಸ್ಪತ್ರೆ ಸಮಸ್ಯೆಗಳ ಸರಮಾಲೆ ಹೊದ್ದುಕೊಂಡು ಬಿದ್ದಿದೆ. ಇಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ. ಈ ಸಂಬಂಧ ತಾಲೂಕು, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಖಾಯಂ ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮವಹಿಸುತ್ತೇನೆಂದು ಭರವಸೆ ನೀಡಿದರು.

ಕಳಸ ಪಟ್ಟಣದ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಈ ಸಂಬಂಧ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯವರಿಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಕಳಸ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಜು.29ರಂದು ಆಸ್ಪತ್ರೆ ಎದುರು ಧರಣಿ ನಡೆಸುತ್ತೇವೆ ಎಂದು ಜೆಡಿಎಸ್ ಮುಖಂಡ ರವಿ ರೈ ಇದೇ ವೇಳೆ ಜಿಪಂ ಅಧ್ಯಕ್ಷೆ ಸುಜಾತ ಅವರ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News