"ಜೈ ಶ್ರೀ ರಾಮ್ ಘೋಷಣೆ ಸಹಿಸಲು ಸಾಧ್ಯವಿಲ್ಲವೆಂದಾದರೆ ಚಂದ್ರಲೋಕಕ್ಕೆ ಹೋಗಿ"

Update: 2019-07-26 06:27 GMT
ಅಡೂರು ಗೋಪಾಲಕೃಷ್ಣನ್, ಬಿ ಗೋಪಾಲಕೃಷ್ಣನ್

ತಿರುವನಂತಪುರಂ: ದೇಶದಲ್ಲಿ ಗುಂಪು ಥಳಿತ ಪ್ರಕರಣಗಳಿಗೆ ತಕ್ಷಣ ಅಂತ್ಯ ಹಾಡಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಖ್ಯಾತ ಚಿತ್ರ ನಿದೇರ್ಶಕ ಅಡೂರ್ ಗೋಪಾಲಕೃಷ್ಣನ್ ಸಹಿತ  49 ಮಂದಿ ಸೆಲೆಬ್ರಿಟಿಗಳು ಪತ್ರ ಬರೆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ವಕ್ತಾರ ಬಿ ಗೋಪಾಲಕೃಷ್ಣನ್ "ಜೈ ಶ್ರೀ ರಾಮ್ ಘೋಷಣೆ ಕೂಗುವುದನ್ನು ಸಹಿಸಲಾಗುವುದಿಲ್ಲವೆಂದಾದರೆ ಅಡೂರು ಗೋಪಾಲೃಷ್ಣನ್ ಅವರು ಚಂದ್ರಲೋಕಕ್ಕೆ ಅಥವಾ ಬೇರೆ ಯಾವುದೇ ಗ್ರಹಕ್ಕೆ ಹೋಗಲು ಸ್ವತಂತ್ರರು'' ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ.

ಈ ಕುರಿತಂತೆ ಫೇಸ್ ಬುಕ್ ಪೋಸ್ಟ್ ಒಂದನ್ನು ಮಾಡಿರುವ ಬಿಜೆಪಿ ನಾಯಕ, "ಅಡೂರು ಗೋಪಾಲಕೃಷ್ಣನ್ ಅವರು ಗೌರವಾನ್ವಿತ ಚಿತ್ರ ತಯಾರಕರಾಗಿದ್ದರೂ ಅವರು ದೇಶದ ಸಂಸ್ಕೃತಿಯನ್ನು ಅವಮಾನಿಸಲು ಆಗಿಲ್ಲ,'' ಎಂದಿದ್ದಾರೆ. ಕೇರಳದಲ್ಲಿ ಜುಲೈ 17ರಿಂದ ಆಗಸ್ಟ್ 16ರ ತನಕ ರಾಮಾಯಣ ಮಾಸ ಆಚರಿಸಲಾಗುತ್ತಿರುವುದರಿಂದ ಜನರು ಜೈ ಶ್ರೀ ರಾಮ್ ಎಂದು ಹೇಳುತ್ತಾರೆ, ನಿಮಗೆ ಅದನ್ನು ಕೇಳಲು ಇಷ್ಟವಿಲ್ಲವೆಂದಾದರೆ ನಿಮ್ಮ ಹೆಸರನ್ನು ಶ್ರೀಹರಿಕೋಟಾದಲ್ಲಿ ನೋಂದಾಯಿಸಿಕೊಳ್ಳಿ, ನೀವು ಚಂದ್ರಲೋಕಕ್ಕೆ ಹೋಗಬಹುದು,'' ಎಂದು ಬಿಜೆಪಿ ನಾಯಕ ಹೇಳಿದರಲ್ಲದೆ ಅಡೂರು ಗೋಪಾಲಕೃಷ್ಣನ್ ತಮ್ಮ ಹೆಸರು ಬದಲಾಯಿಸಿದರೆ ಒಳ್ಳೆಯದು ಎಂದೂ ಹೇಳಿಕೊಂಡಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಡೂರು ಗೋಪಾಲಕೃಷ್ಣನ್ "ತಾವು ಬರೆದ ಪತ್ರ ಸರಕಾರದ ವಿರುದ್ಧವೂ ಅಲ್ಲ, ಜೈ ಶ್ರೀ ರಾಮ್ ಘೋಷಣೆ ಕೂಗುವವರ ವಿರುದ್ಧವೂ ಇಲ್ಲ, ಆದರೆ ಈ ಘೋಷಣೆಯನ್ನು ಯುದ್ಧದ ಕರೆಯೆಂಬಂತೆ ಬಳಸಿ ಹೆಚ್ಚುತ್ತಿರುವ ಗುಂಪು ಥಳಿತ ಘಟನೆಗಳ ವಿರುದ್ಧವಾಗಿದೆ,'' ಎಂದರು.

"ನಾನು ಕೂಡ ಒಬ್ಬ ಭಕ್ತ, ಮರ್ಯಾದ ಪುರುಷೋತ್ತಮ ಎಂದು ಕರೆಯಲ್ಪಡುವ ರಾಮನನ್ನು ಈ ರೀತಿಯಲ್ಲಿ ಅವಮಾನಿಸುತ್ತಿರುವುದನ್ನು ಕಂಡು ಬೇಸರವಾಗುತ್ತದೆ. ವಿರುದ್ಧ ಅಭಿಪ್ರಾಯ ಹೊಂದಿರುವವರನ್ನು ಹೊರಕ್ಕೆಸೆಯಬಹುದೆಂದು ಯಾರೂ ಅಂದುಕೊಳ್ಳಬಾರದು, ಇಂತಹ ಪ್ರಯತ್ನಗಳನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ,'' ಎಂದರು.

"ಸರಕಾರ ಗುಂಪು ಥಳಿತ ಘಟನೆಗಳನ್ನು ತಡೆಯಲು ವಿಫಲವಾದರೆ ಸಮಾಜದಲ್ಲಿ ಅಶಾಂತಿಯುಂಟಾಗಿ ನಾವು ಭಾರೀ ಬೆಲೆ ತೆರಬೇಕಾದೀತು,'' ಎಂದು  ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News