ಚಿಕ್ಕಮಗಳೂರು ಕ್ಷೇತ್ರಕ್ಕೆ ಸಿ.ಟಿ.ರವಿ ನೀಡಿರುವುದು ಸುಳ್ಳು ಆಶ್ವಾಸನೆಗಳು: ಕಾಂಗ್ರೆಸ್ ವಕ್ತಾರ ಶಿವಾನಂದ ಸ್ವಾಮಿ

Update: 2019-07-26 18:43 GMT

ಚಿಕ್ಕಮಗಳೂರು, ಜು.26: ಕಳೆದ 17 ವರ್ಷಗಳಿಂದ ಶಾಕರಾಗಿರುವ ಸಿ.ಟಿ.ರವಿಯವರು ಒಮ್ಮೆ ಸಚಿವರೂ ಆಗಿದ್ದು, ಶಾಸಕ ರವಿ ಅವರ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಆದರೆ ಶಾಸಕ ರವಿ ಜಿಲ್ಲೆಗೆ ಯಾವ ಯೋಜನೆಗಳನ್ನೂ ತರದಿದ್ದರೂ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಾ ಅಧಿಕಾರ ಅನುಭವಿಸುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ. ಶಿವಾನಂದಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಯೋಜನೆ ತರದಿದ್ದರೂ ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಳೆದ 17 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ.ರವಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಾತ್ರ ಶೂನ್ಯ. ಬಯಲುಸೀಮೆ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರುವುದಾಗಿ ಹೇಳುತ್ತಾರೆ. ಆದರೆ ಇದುವರೆಗೂ ಅಂತಹ ಯಾವುದೇ ಯೋಜನೆ ತರಲು ಮುಂದಾಗಿಲ್ಲ, ಕರಗಡ ಕುಡಿಯುವ ನೀರಿನ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಈಗಲೂ ಕುಡಿಯುವ ನೀರಿನ ಯೋಜನೆ ಕುರಿತು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಗೆ ಇಎಸ್‍ಐ ಆಸ್ಪತ್ರೆ ತರುವುದಾಗಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ಕೃಷಿ ಕೈಗಾರಿಕಾ ಜಿಲ್ಲೆ ಎಂದು ಹೆಸರು ಪಡೆದುಕೊಂಡಿದೆ. 15ರಿಂದ20 ಸಾವಿರ ಕಾರ್ಮಿಕರು ಮಾತ್ರ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ 1951ರಲ್ಲಿ ಜಾರಿಗೆ ಬಂದಿದೆ. 1956ರಲ್ಲಿ ಈ ಕಾಯ್ದೆಗೆ ರಾಜ್ಯ ಸರಕಾರವು ನಿಯಮಗಳನ್ನು ರೂಪಿಸಿದೆ. ಅದರಂತೆ 12-50 ಎಕರೆ ತೋಟವನ್ನು ಯಾರಾದರೂ ಹೊಂದಿದ್ದರೆ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠಕೂಲಿ, ಭವಿಷ್ಯ ನಿಧಿ, ವಸತಿ ಸೇರಿದಂತೆ ಆರೋಗ್ಯವನ್ನು ಆಯಾ ತೋಟಗಳ ಮಾಲಕರೆ ಒದಗಿಸಬೇಕಾಗುತ್ತದೆ. ಈ ಕಾಯ್ದೆಯನ್ವಯ ಜಿಲ್ಲೆಯಲ್ಲಿ ಬಹುತೇಕ ತೋಟಗಳ ಮಾಲಕರು ಕಾರ್ಮಿಕರಿಗೆ ಆರೋಗ್ಯವನ್ನು ಒದಗಿಸುತ್ತಿದ್ದಾರೆ ಎಂದು ಹೇಳಿದರು.

2010ರಲ್ಲಿ ಕಾಯ್ದೆಗೆ ಸರಕಾರ ತಿದ್ದುಪಡಿ ತಂದಿದೆ. ಅದರಂತೆ 12ರಿಂದ 50 ಎಕರೆ ತೋಟದ ಮಾಲಕರು ಕಾರ್ಮಿಕರಿಗಾಗಿ ನರ್ಸ್ ಮತ್ತು ವೈದ್ಯರನ್ನು ಹೊಂದಿರಬೇಕು. ತೋಟದ 10ಕಿ.ಮೀ. ವ್ಯಾಪ್ತಿಯೊಳಗೆ ಇರುವ ವೈದ್ಯರನ್ನು ತೋಟಕ್ಕೆ ನೇಮಿಸಿಕೊಳ್ಳಬೇಕು. ಜಿಲ್ಲೆಯ ಕೆಲವೊಂದು ನರ್ಸಿಂಗ್ ಹೋಂಗಳನ್ನು ಈ ಕಾಯ್ದೆಯನ್ವಯ ನಿಗದಿಪಡಿಸಲಾಗಿದ್ದು, ಅಲ್ಲಿ ಕಾರ್ಮಿಕರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಅವಕಾಶವಿದೆ ಎಂದ ಅವರು, ಇಎಸ್‍ಐ ಆಸ್ಪತ್ರೆ ಮಂಜೂರಾದಲ್ಲಿ ಸದರಿ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಕಾರ್ಮಿಕರು ಮತ್ತು ಪ್ಲಾಂಟೇಶನ್ ಮಾಲಕರು ಪ್ರತಿ ತಿಂಗಳು ಕಂತನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ಕಾರ್ಮಿಕರು ಮತ್ತು ತೋಟದ ಮಾಲಕರುಗಳಿಗೆ ಹೆಚ್ಚಿನ ಹೊರೆಯಾಗುತ್ತದೆ. ಶಾಸಕ ಸಿ.ಟಿ.ರವಿ ಅವರಿಗೆ ಬೆಳೆಗಾರರು ಮತ್ತು ಕಾರ್ಮಿಕರಿಗೆ ಒಳ್ಳೆಯದನ್ನು ಮಾಡಬೇಕೆಂಬ ಕಾಳಜಿ ಇದ್ದರೆ ಅವರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರ ಮೇಲೆ ಒತ್ತಡ ಹಾಕಲಿ. ಅದನ್ನು ಬಿಟ್ಟು ಸುಳ್ಳು ಆಶ್ವಾಸನೆ ಕೊಡುವುದನ್ನು ಬಿಡಲಿ ಎಂದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಸುರೇಶ್, ರಸೂಲ್ ಖಾನ್, ಸೋಮಶೇಖರ್ ಉಪಸ್ಥಿತರಿದ್ದರು.

ನಗರಸಭೆಯಲ್ಲಿ ಜನ ಸಾಮಾನ್ಯರ ಯಾವುದೇ ಕೆಲಸವೂ ಆಗುತ್ತಿಲ್ಲ. ಕಚೇರಿಯು ಮಧ್ಯವರ್ತಿಗಳ ಹಿಡಿತದಲ್ಲಿದೆ. ಜಿಲ್ಲಾಧಿಕಾರಿಗಳು 4 ಕೊಠಡಿಗಳ ಮಧ್ಯೆ ಕುಳಿತು ಕೆಲಸ ಮಾಡುವುದನ್ನು ಬಿಟ್ಟು ವಾರ್ಡ್‍ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಪರಿಹರಿಸಲು ಮುಂದಾಗಬೇಕು.
- ರೂಬೆನ್ ಮೊಸೆಸ್, ನಗರಸಭೆ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News