ಆಸ್ಟ್ರೇಲಿಯ ಟೆಸ್ಟ್ ತಂಡ ಪ್ರಕಟ: ಸ್ಮಿತ್, ವಾರ್ನರ್ ವಾಪಸ್

Update: 2019-07-27 04:59 GMT

ಲಂಡನ್, ಜು.26: ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಆರಂಭಿಕ ಬ್ಯಾಟ್ಸ್ ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಜೊತೆಗೆ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯದ 17 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ಆ.1ರಿಂದ ಐದು ಪಂದ್ಯಗಳ ಆ್ಯಶಸ್ ಸರಣಿ ಆರಂಭವಾಗಲಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್‌ಗೆ ಕ್ರಿಕೆಟ್ ಆಸ್ಟ್ರೇಲಿಯ ನಿಷೇಧ ಹೇರಿತ್ತು.

ಮಾಜಿ ನಾಯಕ ಸ್ಮಿತ್ ಹಾಗೂ ಉಪ ನಾಯಕ ವಾರ್ನರ್‌ರನ್ನು ಕ್ರಿಕೆಟ್ ಆಸ್ಟ್ರೇಲಿಯ 12 ತಿಂಗಳ ಕಾಲ ನಿಷೇಧ ಹೇರಿತ್ತು. ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡಿಗೆ ಸ್ಯಾಂಡ್‌ಪೇಪರ್‌ನಿಂದ ಉಜ್ಜಿದ್ದ ಬ್ಯಾಂಕ್ರಾಫ್ಟ್‌ಗೆ9 ತಿಂಗಳಗಳ ಕಾಲ ನಿಷೇಧ ಹೇರಲಾಗಿತ್ತು.

ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಮಿತ್ ಹಾಗೂ ವಾರ್ನರ್ ಆ್ಯಶಸ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಹುಟ್ಟಿಸಿದ್ದರು. ಬ್ಯಾಂಕ್ರಾಫ್ಟ್ ಇಂಗ್ಲೆಂಡ್ ಕೌಂಟಿ ತಂಡ ಡುಹ್ರಾಂನ ನಾಯಕತ್ವ ವಹಿಸಿದ್ದರು. ಈ ವಾರ ಸೌತಾಂಪ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಔಟಾಗದೆ 93 ರನ್ ಗಳಿಸಿದ್ದರು.

‘‘ಇತ್ತೀಚೆಗೆ ಉತ್ತಮ ಪ್ರದರ್ಶನ ತೋರಿರುವ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ’’ ಎಂದು ಆಸ್ಟ್ರೇಲಿಯದ ರಾಷ್ಟ್ರೀಯ ಆಯ್ಕೆಗಾರ ಟ್ರೆವರ್ ಹಾನ್ಸ್ ಹೇಳಿಕೆ ನೀಡಿದ್ದಾರೆ.

ಆ್ಯಶಸ್ ಚಾಂಪಿಯನ್ ಆಸ್ಟ್ರೇಲಿಯ 2001ರ ಬಳಿಕ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿ ಆ್ಯಶಸ್ ಸರಣಿ ಜಯಿಸುವತ್ತ ಚಿತ್ತವಿರಿಸಿದೆ.

 ಆಸ್ಟ್ರೇಲಿಯದ 17 ಸದಸ್ಯರ ತಂಡ

ಟಿಮ್ ಪೈನ್(ನಾಯಕ,ವಿಕೆಟ್‌ಕೀಪರ್), ಕ್ಯಾಮರೂನ್ ಬ್ಯಾಂಕ್ರಾಫ್ಟ್, ಪ್ಯಾಟ್ರಿಕ್ ಕಮಿನ್ಸ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಸ್‌ಚಾಗ್ನೆ, ನಥಾನ್ ಲಿೊನ್, ಮಿಚೆಲ್ ಮಾರ್ಷ್, ಮೈಕಲ್ ನೆಸೆರ್, ಜೇಮ್ಸ್ ಪ್ಯಾಟಿನ್ಸನ್, ಪೀಟರ್ ಸಿಡ್ಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News