ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ಶಿಕ್ಷಣ ಶಿಲ್ಪಿಗಳ ನಿರ್ಲಕ್ಷ್ಯ: ಇಲ್ಯಾಸ್ ತುಂಬೆ

Update: 2019-07-27 16:13 GMT

ಬೆಂಗಳೂರು, ಜು.27: ಆಧುನಿಕ ಶಿಕ್ಷಣದ ಶಿಲ್ಪಿಗಳಾದ ರಾಜಾರಾಮ್ ಮೋಹನ್ ರಾಯ್, ಜ್ಯೋತಿ ಬಾಫುಲೆ, ಶಾಹು ಮಹರಾಜ್, ಸರ್ ಸಯ್ಯದ್ ಅಹ್ಮದ್ ಖಾನ್, ಮೌಲಾನಾ ಆಜಾದ್, ಡಾ.ಬಿ.ಆರ್.ಅಂಬೇಡ್ಕರ್, ಡಾ.ಝಾಕಿರ್ ಹುಸೇನ್ ಮುಂತಾದವರನ್ನು ರಾಷ್ಟ್ರೀಯ ಶಿಕ್ಷಣ ನೀತಿ- 2019ಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತುಂಬೆ ಆರೋಪಿಸಿದ್ದಾರೆ.

ನಗರದ ಎಸ್‌ಸಿಎಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2019( ಎನ್‌ಇಪಿ)ರ ಬಗ್ಗೆ ಚಿಂತಕರು, ಶಿಕ್ಷಣ ತಜ್ಞರು, ಜನಪರ ಹೋರಾಟ ಗಾರರು, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ನಾಯಕರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ಹಾಗೂ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಎನ್‌ಇಪಿ- 2019 ಕರಡು ವಿಶ್ವಾಸಾರ್ಹತೆ ಹೊಂದಿಲ್ಲ. ಏಕೆಂದರೆ 2019ರ ಹೊಸ ಅಂಕಿ ಅಂಶಗಳು ಇದರಲ್ಲಿ ಸೇರಿಲ್ಲ. ಹಳೆಯ ವರದಿಗಳನ್ನು ಅವಲಂಬಿಸಿಯೇ ಕರಡು ಪ್ರಸ್ತಾಪಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಯಾವುದೇ ಸಾರ್ವಜನಿಕ ಸಮೀಕ್ಷೆಯ ಆಧಾರದಲ್ಲಿ ಎನ್‌ಇಪಿ-2019ರ ಕರಡನ್ನು ಸಿದ್ಧಪಡಿಸಲಾಗಿಲ್ಲ. ಇಲ್ಲಿರುವ ಸಲಹೆಗಳು, ಕುಲಪತಿಗಳು ಮತ್ತು ಅಧಿಕಾರಿಗಳೇ ಹೆಚ್ಚಾಗಿರುವ ಸಮಿತಿಯು ಬೆಂಗಳೂರು ಮತ್ತು ದೆಹಲಿಯಲ್ಲಿ ಕುಳಿತು ಯಾಂತ್ರಿಕವಾಗಿ ಸ್ವೀಕರಿಸಿದ ಸಲಹೆಗಳಾಗಿವೆ. ಶಿಕ್ಷಣ ತಜ್ಞರು, ಶಿಕ್ಷಕರು, ಸಮುದಾಯ, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸಮಿತಿಯು ಸಂಪರ್ಕಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಲ್ಲಿಸಿರುವ ಆಕ್ಷೇಪಣೆಗಳು: ಅನುದಾನದ ಹಂಚಿಕೆಯನ್ನು ಉಲ್ಲೇಖಿಸಲಾಗಿಲ್ಲ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ಸುರಕ್ಷತೆ ಮತ್ತು ಅನುಷ್ಠಾನದ ಉಲ್ಲೇಖವಿಲ್ಲ. ಪೌರಾಣಿಕ ಅವೈಜ್ಞಾನಿಕ ಕ್ರಮಗಳನ್ನು ವಿಶ್ವ ದರ್ಜೆಯ ಶಿಕ್ಷಣಕ್ಕೆ ಹೊಂದಿಸಲಾಗಿದೆ. ವಿದ್ಯಾರ್ಥಿಗಳ ಒತ್ತಡ ಮತ್ತು ಸಮಸ್ಯೆಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ. ಅಲ್ಲದೆ, ಜಾತಿ ವ್ಯವಸ್ಥೆ ಮೇಲುಗೈ ಸಾಧಿಸಿರುವ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡುವುದನ್ನು ಸಭೆಯಲ್ಲಿ ಆಕ್ಷೇಪಣೆ ಮಾಡಲಾಗಿದೆ.

ಸಭೆಯ ಸಲಹೆಗಳು

* ಖಾಸಗಿ ವಲಯದ ಕೈಗಳಿಗೆ ಶಿಕ್ಷಣವನ್ನು ನೀಡಬಾರದು.

* ಜಿಡಿಪಿಯ ಶೇ.10ರಷ್ಟು ಸಾರ್ವಜನಿಕ ವಲಯದ ಶಿಕ್ಷಣಕ್ಕೆ ಮೀಸಲಿಡಬೇಕು.

* ಎಎಂಯು, ಜೆಎಂಐ ತರಹದ ಸಂಸ್ಥೆಗಳನ್ನು ರಕ್ಷಿಸಬೇಕು.

* ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಮೂಲಸೌಕರ್ಯವನ್ನು ದೇಶದ ಹಿಂದುಳಿದ ಪ್ರದೇಶಗಳಿಗೆ ಆದ್ಯತೆಯ ಆಧಾರದ ಮೇಲೆ ಜನಸಂಖ್ಯೆಯ ಅನುಪಾತದಲ್ಲಿ ಸ್ಥಾಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News