Big Breaking News: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್

Update: 2019-07-28 14:17 GMT

ಬೆಂಗಳೂರು, ಜು.28: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ 14 ಮಂದಿ ಕಾಂಗ್ರೆಸ್ ಶಾಸಕರನ್ನು ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರನ್ನು ಜು.28 ರಿಂದಲೇ ಅನ್ವಯವಾಗುವಂತೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ 15ನೇ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಲಾಗಿದೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

ರವಿವಾರ ನಗರದಲ್ಲಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.10ರಂದು ಕೆಲವು ಕಾಂಗ್ರೆಸ್ ಶಾಸಕರನ್ನು ಅನರ್ಹತೆ ಮಾಡುವಂತೆ ಕೋರಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಆಯಾ ಶಾಸಕರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು ಎಂದರು.

ಆದರೆ, ಆ ಶಾಸಕರು ವಿಚಾರಣೆಗೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದರು. ನಾವು ಅದಕ್ಕೆ ಒಪ್ಪಿಗೆ ನೀಡಿಲ್ಲ. ಈ ರೀತಿಯ ಸನ್ನಿವೇಶದಲ್ಲಿ ದೇಶದ ವಿವಿಧ ರಾಜ್ಯಗಳ ವಿಧಾನಸಭಾಧ್ಯಕ್ಷರು ಕೈಗೊಂಡಿರುವ ಕ್ರಮಗಳು, ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಸ್ಪೀಕರ್‌ಗಳು ಕೈಗೊಂಡಿರುವ ಕ್ರಮಗಳು, ರವಿನಾಯಕ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಧ್ಯಯನ ನಡೆಸಿ, ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ನೀಡಿದ್ದ ದೂರಿನ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇವತ್ತು 14 ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದರು.

ಅನರ್ಹಗೊಂಡ ಶಾಸಕರು: ಕಾಂಗ್ರೆಸ್ ಪಕ್ಷದ ಶಾಸಕರಾದ ಪ್ರತಾಪ್‌ ಗೌಡ ಪಾಟೀಲ್(ಮಸ್ಕಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಎಸ್.ಟಿ.ಸೋಮಶೇಖರ್(ಯಶವಂತಪುರ), ಭೈರತಿ ಬಸವರಾಜು (ಕೆ.ಆರ್.ಪುರ), ಆನಂದ್‌ ಸಿಂಗ್(ವಿಜಯನಗರ), ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಆರ್.ರೋಷನ್ ಬೇಗ್(ಶಿವಾಜಿನಗರ).

ಮುನಿರತ್ನ (ರಾಜರಾಜೇಶ್ವರಿ ನಗರ), ಎಂಟಿಬಿ ನಾಗರಾಜ್(ಹೊಸಕೋಟೆ) ಹಾಗೂ ಶ್ರೀಮಂತ ಪಾಟೀಲ್(ಕಾಗವಾಡ)ರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜೆಡಿಎಸ್ ಶಾಸಕರಾದ ಅಡಗೂರು ಎಚ್.ವಿಶ್ವನಾಥ್ (ಹುಣಸೂರು), ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಹಾಗೂ ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)ರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದರು.

ನ್ಯಾಯಾಲಯಕ್ಕೆ ಹೋಗಲು ಸ್ವತಂತ್ರರು: ನಾನು ಬಹಳ ಅಧ್ಯಯನ ನಡೆಸಿ ಶಾಸಕರನ್ನು ಅನರ್ಹಗೊಳಿಸುವ ತೀರ್ಮಾನ ಮಾಡಿದ್ದೇನೆ. ಈ ತೀರ್ಪಿನ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ ಶಾಸಕರು ನ್ಯಾಯಾಲಯಕ್ಕೆ ಹೋಗಲು ಸ್ವತಂತ್ರರಿದ್ದಾರೆ ಎಂದು ಅವರು ಹೇಳಿದರು.

ಸೋಮವಾರ ಸದನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಜೊತೆ ದೂರವಾಣಿ ಮೂಲಕ ಚರ್ಚೆ ಮಾಡಿ, ಸೋಮವಾರ ವಿಧಾನಸಭೆ ಅಧಿವೇಶನ ನಡೆಸಿ, ಧನ ವಿನಿಯೋಗ ಮಸೂದೆ ಮಂಡನೆ ಹಾಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಜು.31ರೊಳಗೆ ಧನ ವಿನಿಯೋಗ ಮಸೂದೆ ಅಂಗೀಕಾರಗೊಳ್ಳಬೇಕು. ಆದುದರಿಂದ, ಸೋಮವಾರವೇ ಧನ ವಿನಿಯೋಗ ಮಸೂದೆ ಮೇಲೆ ಚರ್ಚೆ ನಡೆಸಿ, ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಸರಕಾರಿ ರಜೆ ಇದ್ದರೂ ನಮ್ಮ ಸಿಬ್ಬಂದಿಗಳು ಇದಕ್ಕಾಗಿ ನಿನ್ನೆ ಹಾಗೂ ಇಂದು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಗೂ ಮುನ್ನ ಇಂದು ಮುಂಜಾನೆ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿಯನ್ನು ನೆನೆದು ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದರು. ನನ್ನ ವೈಯಕ್ತಿಕ ಜೀವನದಲ್ಲಿ ಜೈಪಾಲ್ ರೆಡ್ಡಿ ಅವರ ಪ್ರಭಾವ ಹೆಚ್ಚಿದೆ. ನನ್ನ ರಾಜಕೀಯ ಜೀವನಕ್ಕೆ ಅವರ ಕೊಡುಗೆ ಅಪಾರ. ಅವರಂತಹ ವ್ಯಕ್ತಿಗಳು ಈ ದೇಶದಲ್ಲಿದ್ದಾರಾ? ಎಂಬ ಆಶ್ಚರ್ಯ ಉಂಟಾಗುತ್ತದೆ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಸದ್ಯದ ರಾಜಕೀಯ ಪರಿಸ್ಥಿತಿಯಿಂದ ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ನಾಲ್ಕು ದಶಕಗಳ ನನ್ನ ರಾಜಕೀಯ ಜೀವನದ ಅಂತಿಮ ಘಟಕ್ಕೆ ಬಂದು ನಿಂತಿದ್ದೇನೆ. ಪಕ್ಷಾಂತರ ನಿಷೇಧ ಸೇರಿದಂತೆ ಎಲ್ಲ ವಿಚಾರವನ್ನು ನಾಳೆ ಸದನದಲ್ಲಿ ಹೇಳುತ್ತೇನೆ.

-ಕೆ.ಆರ್.ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News