ರೋಹಿತ್ ಜೊತೆ ಭಿನ್ನಾಭಿಪ್ರಾಯದ ವದಂತಿಯ ವೇಳೆಯೇ ಪತ್ರಿಕಾಗೋಷ್ಠಿ ತಪ್ಪಿಸಿಕೊಂಡ ಕೊಹ್ಲಿ

Update: 2019-07-28 19:11 GMT

ಹೊಸದಿಲ್ಲಿ, ಜು.28: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಧ್ಯೆ ಏನು ನಡೆಯುತ್ತಿದೆ? ಭಾರತದ ನಾಯಕ ಹಾಗೂ ಉಪ ನಾಯಕನ ನಡುವೆ ಎಲ್ಲವೂ ಸರಿಯಿದೆಯೇ?ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.

ವೆಸ್ಟ್‌ಇಂಡೀಸ್ ಸರಣಿಗಾಗಿ ಕೆರಿಬಿಯನ್ ನಾಡಿಗೆ ಪ್ರಯಾಣಿಸುವ ಮೊದಲು ನಾಯಕ ಕೊಹ್ಲಿ ಸಂಪ್ರದಾಯದಂತೆ ಪತ್ರಿಕಾಗೋಷ್ಠಿ ನಡೆಸಬೇಕಾಗಿತ್ತು. ಭಾರತೀಯ ತಂಡ ಸರಣಿಯನ್ನಾಡಲು ವಿದೇಶಕ್ಕೆ ತೆರಳುವ ಮೊದಲು ಪತ್ರಿಕಾಗೋಷ್ಠಿ ನಡೆಸುವ ನಿಯಮವಿದೆ. ಭಾರತ ಕ್ರಿಕೆಟ್ ತಂಡ ಸೋಮವಾರ ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್‌ನಲ್ಲಿ ಕೊನೆಯ ಟಿ-20 ಪಂದ್ಯವನ್ನಾಡುವ ಮೊದಲು ಅಮೆರಿಕದಲ್ಲಿ ಎರಡು ಟಿ-20ಪಂದ್ಯಗಳನ್ನಾಡಲಿದೆ. ಆ ಬಳಿಕ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ ವೆಸ್ಟ್‌ಇಂಡೀಸ್‌ನಲ್ಲಿ ಭಾರತ ಎ ತಂಡದೊಂದಿಗಿರುವ ಆಟಗಾರರನ್ನು ಹೊರತುಪಡಿಸಿ ಉಳಿದ ಟೆಸ್ಟ್ ತಂಡದ ಸದಸ್ಯರು ತಡವಾಗಿ ವಿಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆ.

ಕೊಹ್ಲಿ ಅಮೆರಿಕ ವಿಮಾನ ಏರುವ ಮೊದಲು ಸೋಮವಾರ ಬೆಳಗ್ಗೆ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಎದುರಿಸುವುದಿಲ್ಲ. ಇಡೀ ಘಟನೆಯ ಕುರಿತು ರೋಹಿತ್ ತುಟಿ ಬಿಚ್ಚದೇ ಕುಳಿತಿದ್ದಾರೆ.

ಬಿಸಿಸಿಐ ಕಳೆದ ರವಿವಾರ ವಿಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿತ್ತು. ಉಭಯ ತಂಡಗಳ ಮಧ್ಯೆ ಆಗಸ್ಟ್ 3ರಿಂದ ಸರಣಿ ಆರಂಭವಾಗಲಿದೆ.

ವೆಸ್ಟ್‌ಇಂಡೀಸ್‌ಗೆ ತೆರಳಲಿರುವ ಭಾರತೀಯ ತಂಡ ನಿರ್ಗಮನ ಪೂರ್ವ ಪತ್ರಿಕಾಗೋಷ್ಠಿಯನ್ನು ನಡೆಸುವುದಿಲ್ಲ. ನಿರ್ಗಮನದ ಮೊದಲು ಪತ್ರಿಕಾಗೋಷ್ಠಿ ನಡೆಸಲು ಸಮಯವಿಲ್ಲ. ನಾವು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

 ಭಾರತ ತಂಡ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಸೋತು ಸ್ವದೇಶಕ್ಕೆ ವಾಪಸಾದ ಬಳಿಕ ಕೊಹ್ಲಿ ಹಾಗೂ ರೋಹಿತ್ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿದ ಬಳಿಕ ಇಂತಹ ವದಂತಿಗೆ ಮತ್ತಷ್ಟು ಪುಷ್ಠಿ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News