ಜನಾದೇಶವಿಲ್ಲದೆ ‘ಸ್ಥಿರ ಸರಕಾರ’ ಸಾಧ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-07-29 14:19 GMT

ಬೆಂಗಳೂರು, ಜು. 29: ‘ಸಂವಿಧಾನ ಬದ್ಧತೆ, ಜನಾದೇಶವಿಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಅವರು ಎಷ್ಟು ದಿನ ಇರುತ್ತಾರೆಂಬುದು ಖಚಿತವಿಲ್ಲ. ಹೀಗಿರುವಾಗ ಸ್ಥಿರ ಸರಕಾರ ನೀಡಲು ಹೇಗೆ ಸಾಧ್ಯ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಸೋಮವಾರ ಧಾನಸಭೆಯಲಿ ‘ಯಡಿಯೂರಪ್ಪ ನೇತೃತ್ವದ ಸಂಪುಟದ ವಿಶ್ವಾಸ ವ್ಯಕ್ತಪಡಿಸುವ ಪ್ರಸ್ತಾವ’ದ ಮೇಲೆ ಮಾತನಾಡಿದ ಅವರು, ನಾನು ಮತ್ತು ಬಿಎಸ್‌ವೈ ಒಟ್ಟಿಗೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಅವರಿಗೆ ಒಮ್ಮೆಯೂ ಜನಾದೇಶ ಸಿಕ್ಕಿಲ್ಲ. ಆದರೆ, ಭಿನ್ನ ಸಂದರ್ಭಗಳಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ಯಡಿಯೂರಪ್ಪ ಸಿಎಂ ಆಗಿರಬೇಕೆಂಬುದು ನನ್ನ ಅಪೇಕ್ಷೆ. ಆದರೆ, ಅವರು ಆ ಸ್ಥಾನದಲ್ಲಿ ಮುಂದುವರಿಯುವುದು ಖಚಿತವಿಲ್ಲ. ತೃಪ್ತರು ಎನ್ನುವ ಅತೃಪ್ತರೊಂದಿಗೆ ಸರಕಾರ ರಚನೆ ಮಾಡಿದ್ದು, ನಿಮಗೆ ಸ್ಥಿರ ಸರಕಾರ ನೀಡಲು ಸಾಧ್ಯವಿಲ್ಲ. ವಿಶ್ವಾಸಮತ ಸಾಬೀತಿಗೆ ಅನೈತಿಕ-ಅಸಂವಿಧಾನಿಕವಾಗಿದ್ದು ನಾವು ವಿರೋಧಿಸುತ್ತೇವೆ ಎಂದರು.

ಆಡಳಿತ ಸ್ಥಗಿತ ಆಗಿರಲಿಲ್ಲ: ಮೈತ್ರಿ ಸರಕಾರ ವಿಶ್ವಾಸಮತ ಮಂಡಿಸಿದ್ದು, ನಾಲ್ಕು ದಿನ ಚರ್ಚೆ ನಡೆಸಿದ್ದು ನಾನೂ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಈ ವೇಳೆ ಯಡಿಯೂರಪ್ಪ ತಮ್ಮ ವಿಶ್ವಾಸಮತ ಸಾಬೀತಿನ ಪ್ರಸ್ತಾವನೆ ಭಾಷಣದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ.

ಆದರೆ, ಮೈತ್ರಿ ಸರಕಾರದ ಅವಧಿಯಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ. ಮೈತ್ರಿ ಪಕ್ಷಗಳ ಪ್ರಣಾಳಿಕೆಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಸರಕಾರದ ಯೋಜನೆ ಮತ್ತು ಮೈತ್ರಿ ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಗೆ ಪ್ರಾಮಾಣಿಕ ಕೆಲಸ ಮಾಡಿದ್ದೇವೆ ಎಂದು ಅವರು ನುಡಿದರು.

ಪುನರುಚ್ಛಾರ: ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ., ಜತೆಗೆ ರಾಜ್ಯ ಸರಕಾರದಿಂದ 4 ಸಾವಿರ ರೂ.ಘೋಷಣೆ ಮಾಡಿದ್ದಾರೆ. ಈ ಹಿಂದೆ ನಾನು ಬಜೆಟ್ ಮಂಡನೆ ವೇಳೆ ಒಣಭೂಮಿ ಬೇಸಾಯಕ್ಕೆ ರೈತ ಬೆಳಕು ಯೋಜನೆಯಡಿ ವಾರ್ಷಿಕ 10 ಸಾವಿರ ರೂ.ಘೋಷಣೆ ಮಾಡಿದ್ದೆ. ಆ ಯೋಜನೆ ಜಾರಿಗೆ ಬಂದಿರಲಿಲ್ಲ ಎಂದರು.

ನೇಕಾರರ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಆದೇಶವೂ ಹೊರಬಿದ್ದಿತ್ತು. ನಮ್ಮ ಯೋಜನೆಗಳನ್ನು ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಅದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದ ಅವರು, ಜನರ ನಿರೀಕ್ಷೆಯಂತೆ ಜನಪ್ರತಿನಿಧಿಗಳು ನಡೆದುಕೊಳ್ಳಬೇಕು ಎಂದು ಹೇಳಿದರು.

ಜನಸೇವೆಗೆ ನಾವು ಪ್ರಾಮಾಣಿಕವಾಗಿರಬೇಕು. ನನ್ನ ಅವಧಿಯಲ್ಲಿ ಆ ಪ್ರಯತ್ನ ಮಾಡಿದ್ದೇನೆ. ಕುಮಾರಸ್ವಾಮಿಯವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆಡಳಿತ ಯಂತ್ರ ಕುಸಿದಿತ್ತು ಎಂಬ ಆರೋಪ ಸುಳ್ಳು. ಮೈತ್ರಿ ಸರಕಾರ ಉತ್ತಮ ಕೆಲಸ ಮಾಡುತ್ತಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News