ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

Update: 2019-07-29 16:32 GMT

ಬೆಂಗಳೂರು, ಜು. 29: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಧನವಿನಿಯೋಗ ವಿಧೇಯಕ ಅನುಮೋದನೆ ನಂತರ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ವಿದಾಯದ ಭಾಷಣದೊಂದಿಗೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಮತ್ತು ಲೇಖಾನುದಾನ ವಿಧೇಯಕ ಅನುಮೋದನೆ ಬಳಿಕ ಮಾತನಾಡಿದ ರಮೇಶ್‌ಕುಮಾರ್, ಸದನದಲ್ಲೇ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ನೀಡಿ ಪೀಠದಿಂದ ನಿರ್ಗಮಿಸಿದರು.

ಒತ್ತಡಕ್ಕೆ ಮಣಿಯುವುದಿಲ್ಲ: ಹದಿನೇಳು ಮಂದಿ ಶಾಸಕ ಅನರ್ಹತೆ ತೀರ್ಮಾನ ಸಂಬಂಧ ನಾನು ಯಾವುದೇ ಒತ್ತಡ ಮತ್ತು ಪ್ರಚೋದನೆಗೆ ಒಳಗಾಗದೆ ಸಂವಿಧಾನ ಬದ್ಧವಾಗಿ ಆದೇಶ ಮಾಡಿದ್ದು, ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದು ಸ್ಪೀಕರ್ ರಮೇಶ್‌ ಕುಮಾರ್ ಸ್ಪಷ್ಟಪಡಿಸಿದರು.

ಸಂವಿಧಾನ ನಿಷ್ಠವಾಗಿ, ಶಕ್ತಿಮೀರಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿರುವೆ. ಸ್ಪೀಕರ್ ಸ್ಥಾನ ದೊಡ್ಡದು. ನಾವು ಅತ್ಯಂತ ಸಣ್ಣವರು. ಅತ್ಯಂತ ಜಾಗೃತಿಯಿಂದ ಸ್ಪೀಕರ್ ಸ್ಥಾನಕ್ಕೆ ಅಪಚಾರವಾಗದಂತೆ ಕೆಲಸ ಮಾಡಿದ್ದು, ಈ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿ ನಿರ್ವಹಿಸಿರುವೆ ಎಂದು ಅವರು ನುಡಿದರು.

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ದೇವರಾಜ ಅರಸು ಅವರ ಪ್ರೇರಣೆಯಿಂದ ರಾಜಕೀಯ ಪ್ರವೇಶ ಮಾಡಿದೆ. ನಾನು ಎಂದೂ ಈ ಸ್ಥಾನವನ್ನು ಬಯಸಿರಲಿಲ್ಲ. ಆದರೆ, 14 ತಿಂಗಳು, 4 ದಿನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ತಮ್ಮ ಮೇಲೆ ವಿಶ್ವಾಸವಿಟ್ಟು ಸ್ಪೀಕರ್ ಸ್ಥಾನ ನಿರ್ವಹಿಸಲು ಸಲಹೆ ಮಾಡಿದ್ದರು. ಅಲ್ಲದೆ, ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ ಸ್ಪೀಕರ್ ಸ್ಥಾನ ಒಪ್ಪಿದೆ. ಸ್ಪೀಕರ್ ಆಯ್ಕೆ ವೇಳೆ ಯಡಿಯೂರಪ್ಪ ಕರೆ ಮಾಡಿ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಸಹಕರಿಸುತ್ತೇವೆ ಎಂದಿದ್ದರು. ಅವರ ಸೌಜನ್ಯಕ್ಕೂ ಋಣಿಯಾಗಿರುವೆ ಎಂದರು.

ಚುನಾವಣೆ ಸುಧಾರಣೆ: ಚುನಾವಣಾ ವ್ಯವಸ್ಥೆ ಸುಧಾರಣೆಯಾಗದೆ ಭ್ರಷ್ಟಾಚಾರ ನಿಲ್ಲಿಸುವುದು ಸಾಧ್ಯವಿಲ್ಲ. ಆದುದರಿಂದ ಚುನಾವಣಾ ವ್ಯವಸ್ಥೆ ಬದಲಾಗಬೇಕು. ಜತೆಗೆ ರಾಜಕೀಯ ಪಕ್ಷಗಳು ಕೌಟುಂಬಿಕ ಹಿಡಿತಗಳಿಂದ ಮುಕ್ತಗೊಳ್ಳಬೇಕಿದೆ. ಅಲ್ಲದೆ, ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸಮಗ್ರ ಚರ್ಚೆಯಾಗಿ ದೇಶದಲ್ಲಿ ಉತ್ತಮ ವ್ಯವಸ್ಥೆ ಜಾರಿಗೆ ಕರ್ನಾಟಕ ಮುಂದಾಗಬೇಕು ಎಂದು ಅವರು ಅಪೇಕ್ಷೆಪಟ್ಟರು.

ಜನಪ್ರತಿನಿಧಿಗಳು ಜೂನ್ 30ರೊಳಗೆ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮವಿದೆ. ಆದರೆ, ಸಲ್ಲಿಸದಿದ್ದರೆ ಏನು ಶಿಕ್ಷೆ ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇಂತಹ ಕೆಲಸಕ್ಕೆ ಬಾರದ ನಿಯಮಗಳಿಂದ ಏನೂ ಪ್ರಯೋಜನವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

‘ಯಾವುದೇ ವ್ಯಕ್ತಿಯ ಸಾರ್ವಜನಿಕ ಜೀವನದ ಬಗ್ಗೆ, ಅಥವಾ ಅವರ ವೈಯಕ್ತಿಕ ವಿಚಾರಗಳನ್ನು ರೋಚಕ ಮಾಡಿ ಅವರ ಕುಟುಂಬ ಮತ್ತು ಸಂಬಂಧಿಕರಿಗೆ ನೋವುಂಟು ಮಾಡಬೇಡಿ, ನೀವು(ಮಾಧ್ಯಮಗಳು) ಮಾಡುವ ಒಂದು ಆತುರದಿಂದ ಯಾವುದೇ ಅನಾಹುತಗಳು ಸಂಭವಿಸಬಾರದು’

-ಕೆ.ಆರ್.ರಮೇಶ್‌ ಕುಮಾರ್, ನಿರ್ಗಮನ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News