ಕುತಂತ್ರದಿಂದಲೇ ನೀವು ಅಧಿಕಾರ ಹಿಡಿದಿದ್ದೀರಿ: ಮಾಜಿ ಸಿಎಂ ಕುಮಾರಸ್ವಾಮಿ

Update: 2019-07-29 14:32 GMT

ಬೆಂಗಳೂರು, ಜು. 29: ‘ಸಿಎಂ ಸ್ಥಾನಕ್ಕಾಗಿ 14 ತಿಂಗಳ ಪರಿಶ್ರಮಪಟ್ಟಿದ್ದೀರಿ, ಇನ್ನಾದರೂ ಶಾಸಕರ ರಾಜೀನಾಮೆ ಕೊಡಿಸುವ ಹುನ್ನಾರ ನಿಲ್ಲಿಸಿ, ನಿಮ್ಮ ಸ್ಥಾನಪಲ್ಲಟಕ್ಕೆ ನಾವೇನೂ ಮಾಡುವುದಿಲ್ಲ. ಅಭಿವೃದ್ಧಿಗಾಗಿ ಕೆಲಸ ಮಾಡಿ’ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ‘ಯಡಿಯೂರಪ್ಪ ನೇತೃತ್ವದ ಸಂಪುಟದ ವಿಶ್ವಾಸ ವ್ಯಕ್ತಪಡಿಸುವ ಪ್ರಸ್ತಾವ’ದ ಮೇಲೆ ಮಾತನಾಡಿದ ಅವರು, ನಾವೇನು ತರಾತುರಿಯಲ್ಲಿ ನಿಮ್ಮ ಸಂಖ್ಯೆ 100ಕ್ಕೆ ಇಳಿಸುವುದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಬೆಂಬಲವಿದೆಯೇ ಹೊರತು ನಿಮ್ಮ ಅಕ್ರಮಗಳಿಗಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

ಕುತಂತ್ರದಿಂದ ಅಧಿಕಾರ: ಮೋದಿ, ನಡ್ಡಾ ಅಥವಾ ಬಿಜೆಪಿಯ ಯಾವುದೇ ನಾಯಕರಿಂದ ನೀವು ಅಧಿಕಾರಕ್ಕೆ ಬಂದಿಲ್ಲ. ಕುತಂತ್ರದಿಂದಲೆ ಅಧಿಕಾರ ಹಿಡಿದಿದ್ದೀರಿ. ವಿಪಕ್ಷ ಸ್ಥಾನದಲ್ಲಿದ್ದ ಸರಕಾರದ ಲೋಪಗಳ ಬಗ್ಗೆ ಮಾಹಿತಿ ಪಡೆದಿದ್ದೀರಿ. ಬಾಯಿ ಚಪಲಕ್ಕೆ ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು ಕೆಲಸ ಮಾಡಿ ಎಂದರು.

ಪಾಪದ ಸರಕಾರ, ನಿರ್ಲಜ್ಜ ಸರಕಾರವಿತ್ತು ಎಂದು ಆರೋಪ ಮಾಡಿದ್ದೀರಿ. ಆದರೆ, ನೀವು ಹೇಳುವ ಪಾಪದ ಸರಕಾರವೇ ರೈತರ ಸಾಲಮನ್ನಾ, ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಬಡವರ ಬಂಧು, ಖಾಸಗಿ ಲೇವಾದೇವಿಗಾರರ ಹಿಡಿತ ತಪ್ಪಿಸಲು ಋಣಮುಕ್ತ ಕಾಯ್ದೆ ರೂಪಿಸಿದೆ. ಇನ್ನು 48ಗಂಟೆಗಳೊಳಗೆ ಉದ್ದೇಶಿತ ಕಾಯ್ದೆಗೆ ನಿಯಮಗಳನ್ನು ರೂಪಿಸಿ ಕಾಯ್ದೆ ಅನುಷ್ಠಾನಕ್ಕೆ ತನ್ನಿ ಎಂದು ಸಲಹೆ ಮಾಡಿದರು.

ಮೈತ್ರಿ ಸರಕಾರ ಯಾವ ರೀತಿ ಜನಪರ ಕೆಲಸಗಳನ್ನು ಮಾಡಿದೆ ಎನ್ನುವುದು ಈಗಾಗಲೇ ದಾಖಲಾಗಿದೆ. ಮೈತ್ರಿ ಸರಕಾರದಿಂದ ಆಡಳಿತ ಕುಸಿದಿತ್ತು ಎಂಬುದು ಸುಳ್ಳು. ಈ ಬಗ್ಗೆ ನೀವು ಸೂಕ್ತ ಆಧಾರದ ಮೂಲಕವೇ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅತೃಪ್ತರಿಂದ ಸಿಎಂ: ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಬರಲು ಅತೃಪ್ತ ಶಾಸಕರು ಕಾರಣ. ಮೊದಲು ಅವರಿಗೆ ನೀವು ಧನ್ಯವಾದಗಳನ್ನು ಹೇಳಬೇಕೆಂದು ಲೇವಡಿ ಮಾಡಿದ ಅವರು, ತೃಪ್ತರು ಮತ್ತು ಅತೃಪ್ತರು ಎಂದು ಪಿಶಾಚಿಗಳಾಗುವರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಸ್ಪೀಕರ್ ಆಗಿದ್ದ ಕೆ.ಜೆ.ಬೋಪಯ್ಯನವರನ್ನು ದುರ್ಬಳಕೆ ಮಾಡಿಕೊಂಡು ಬೆಳಗ್ಗೆ 5ಗಂಟೆಗೆ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಿರಿ. ಆಗ ನಿಮಗೆ ಬಹುಮತ ಇರಲಿಲ್ಲ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೋಗಿದ್ದಿರಿ ಎಂದು ಟೀಕಿಸಿದರು.

ಸಿಎಂ ಸ್ಥಾನದಲ್ಲಿ ಕೂತು ಮೈತ್ರಿ ಸರಕಾರದ ಅವಧಿಯಲ್ಲಿ ಯಾವ ರೀತಿ ಆಡಳಿತ ಯಂತ್ರ ಕುಸಿದಿತ್ತು ಎನ್ನುವ ಮಾಹಿತಿಯನ್ನು ಇಡಬೇಕು. 37 ಶಾಸಕ ಸ್ಥಾನವನ್ನು ಹೊಂದಿರುವ ಎಚ್‌ಡಿಕೆ ಪಾಪದ ದಿನಗಳನ್ನು ನೋಡಿದ್ದೇವೆ ಎಂದು ಹೇಳಿದ್ದೀರಿ. ಇವತ್ತು ರಾಜ್ಯದಲ್ಲಿ ಪವಿತ್ರ ದಿನಗಳು ಪ್ರಾರಂಭವಾಗಿವೆ ಎನ್ನುತ್ತಿದ್ದೀರಿ, ಸಂತೋಷ. ಆದರೆ, ಮೈತ್ರಿ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂಬ ಆತ್ಮ ತೃಪ್ತಿ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News