ನೂತನ ಸರಕಾರ ಅಧಿಕಾರಕ್ಕೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ-ಅರವಿಂದ ಮಾಲಗತ್ತಿ ರಾಜೀನಾಮೆ

Update: 2019-07-29 16:16 GMT
ಪ್ರೊ.ಎಸ್.ಜಿ.ಸಿದ್ದರಾಮಯ್ಯ-ಅರವಿಂದ ಮಾಲಗತ್ತಿ

ಬೆಂಗಳೂರು, ಜು.29: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಲ್ಲಿಸುತ್ತೇವೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕನ್ನಡ ಕಾವಲು ಸಮಿತಿ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆರಂಭವಾಗಿ, ನಂತರದ ದಿನಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಯಿತು ಎಂದರು.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್)ನಲ್ಲಿರುವ ಎಲ್ಲ ಲಿಫ್ಟ್‌ಗಳಲ್ಲಿ ಹಚ್ಚೇವು ಕನ್ನಡದ ದೀಪ ಹಾಡು ಕೇಳುವಂತೆ ಮಾಡಿದ್ದೇವೆ. ಇದೇ ವ್ಯವಸ್ಥೆಯಲ್ಲಿ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿರುವ ಲಿಫ್ಟ್‌ಗಳಿಗೂ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ದೇವನಹಳ್ಳಿ ಬಳಿಯಿರುವ ನಾಡಪ್ರಭು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಘೋಷಣೆ, ಕನ್ನಡ ಸುದ್ದಿಗಳ ಪ್ರಸಾರ, ಫಲಕಗಳನ್ನು ಅಳವಡಿಸುವ ಕೆಲಸ ಮಾಡಲಾಗಿದೆ. ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ತ್ರಿಭಾಷಾ ಸೂತ್ರದಂತೆ ಕನ್ನಡ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಸರೋಜಿನಿ ಮಹಿಷಿ ನೀಡಿರುವ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರದಿಯ ಪರಿಷ್ಕರಣೆ ಕುರಿತು ಸಮಿತಿಯನ್ನು ರಚಿಸಿದ್ದರು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಡಾ.ಎಲ್.ಹನುಮಂತಯ್ಯ ಆರಂಭಿಸಿದ ಕೆಲಸವನ್ನು ನಾನು ಮುಂದುವರೆಸಿ, 2016ರ ನವೆಂಬರ್ 3ರಂದು ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲೆ 21 ಅಂಶಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಸರೋಜಿನಿ ಮಹಿಷಿ ವರದಿ ನೀಡಿದಾಗ ನಮ್ಮ ರಾಜ್ಯದಲ್ಲಿ ಐಟಿ, ಬಿಟಿ ತಂತ್ರಜ್ಞಾನದ ಬೆಳವಣಿಗೆಯಾಗಿರಲಿಲ್ಲ. ಆದುದರಿಂದ, ವರದಿಯನ್ನು ಪರಿಷ್ಕರಿಸಲು ಉದ್ದೇಶಿಸಲಾಯಿತು ಎಂದು ಅವರು ಹೇಳಿದರು.

ಸರಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ವರದಿ ನೀಡಿದ್ದೇವೆ. ಇದನ್ನು ಜಾರಿಗೆ ತಂದರೆ ಆಂಗ್ಲ ಶಾಲೆಗಳ ಅಗತ್ಯವೇ ನಮಗೆ ಇರುವುದಿಲ್ಲ. ನಾವು ನೀಡಿರುವ ವರದಿ ಕೇವಲ ನಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಅಗತ್ಯವಿದ್ದಲ್ಲಿ ಕೇಂದ್ರ ಸರಕಾರದವರು ಇದರಲ್ಲಿನ ಅಂಶಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನುಡಿ ತಂತ್ರಾಂಶ 6 ನ್ನು ಸಿದ್ಧಪಡಿಸಿ ನೀಡಿದ್ದೇವೆ. ನನ್ನ ಅಧಿಕಾರಾವಧಿಯಲ್ಲಿ ತೃಪ್ತಿದಾಯಕವಾಗಿ ಕೆಲಸ ಮಾಡಿದ್ದೇನೆ. ನಮಗೆ ಆತ್ಮ ಸಾಕ್ಷಿ ಹಾಗೂ ಬದುಕಿನಲ್ಲಿ ತಾತ್ವಿಕ ಬದ್ಧತೆ ಇದೆ. ಅದಕ್ಕೆ ಧಕ್ಕೆ ಎದುರಾದಾಗ, ಅದಕ್ಕೆ ಹೊಂದಿಕೊಂಡು ಮುಂದುವರೆಯುವ ಬದಲು, ಎದ್ದು ಹೋಗುವುದು ಸೂಕ್ತ. ನಮಗೆ ಒಗ್ಗದ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ‘ಸೀಮಾತೀತ ಪರ್ಬ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆದರೆ, ಇದೀಗ ನಾನು ರಾಜೀನಾಮೆ ನೀಡಿರುವುದರಿಂದ ಈ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ನೂರಾರು ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ನನ್ನ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಎಂಟು ಯೋಜನೆಗಳನ್ನು ಜಾರಿಗೆ ತರುವ ಕನಸು ಕಂಡಿದ್ದೆ. ಈ ಪೈಕಿ 7 ಯೋಜನೆಗಳು ಮುಕ್ತಾಯವಾಗಿವೆ. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಹೊಸ ಸರಕಾರ ಬಂದಾಗ ರಾಜೀನಾಮೆ ಕೇಳುತ್ತಾರೆ. ಅವರು ಕೇಳುವ ಮುನ್ನ ನಾವೇ ಕೊಟ್ಟು ಮುಂದೆ ಹೋಗೋಣ ಎಂದು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಅರವಿಂದ ಮಾಲಗತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News