ಪಾಂಡವಪುರ: ವೇತನ ಪಾವತಿಗೆ ಒತ್ತಾಯಿಸಿ ಆಸ್ಪತ್ರೆ ಸಿಬ್ಬಂದಿಗಳ ಧರಣಿ

Update: 2019-07-29 18:24 GMT

ಪಾಂಡವಪುರ, ಜು.29: 9 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯ ನಾನ್ ಕ್ಲಿನಿಕಲ್ ಸಿಬ್ಬಂದಿ ಸೋಮವಾರ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದ ಅವರು, ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಂಭತ್ತು ತಿಂಗಳಿನಿಂದಲೂ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಷ್ಟದ ಬದುಕು ನಡೆಸುತ್ತಿದ್ದೇವೆ. ಮಕ್ಕಳ ಶೈಕ್ಷಣಿಕ ಶುಲ್ಕ ಭರಿಸಲಾಗುತ್ತಿಲ್ಲ. ಜತೆಗೆ ಸಂಸಾರ ಸಾಗಿಸುವುದೇ ದುಸ್ತರವಾಗಿದೆ. ಆಣಿ ಬಡ್ಡಿಯವರ ಬಳಿ ಸಾಲ ಸೋಲ ಮಾಡಿ ಜೀವನ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಕುಮಾರ್, ಆಗಸ್ಟ್ 5 ರೊಳಗಾಗಿ  5 ತಿಂಗಳ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಉಳಿದ 4 ತಿಂಗಳ ವೇತನವನ್ನು ಒಂದು ತಿಂಗಳೊಳಗಾಗಿ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ನಾನ್ ಕ್ಲಿನಿಕಲ್ ಸಿಬ್ಬಂದಿಗಳಾದ ವಿನುತಾ, ಜ್ಞಾನಸುಂದರಿ, ಮಹದೇವಮ್ಮ, ಮಂಗಳಮ್ಮ, ರಾಜಮ್ಮ, ಮೇರಿ ರತ್ನ, ಸರೋಜ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News