ಪಕ್ಷಕ್ಕೆ ದ್ರೋಹ ಬಗೆದ ಶಾಸಕರಿಗೆ ಅನರ್ಹ ಶಿಕ್ಷೆ ಐತಿಹಾಸಿಕ ತೀರ್ಪು: ಡಿ.ಬಸವರಾಜ್

Update: 2019-07-29 18:27 GMT

ದಾವಣಗೆರೆ, ಜು.29: ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಶಾಸಕರಿಗೆ ಅನರ್ಹ ಶಿಕ್ಷೆ ನೀಡಿರುವುದು ದೇಶದ ಇತಿಹಾಸದಲ್ಲಿಯೇ ಐತಿಹಾಸಿಕ ತೀರ್ಪು, ಪ್ರಜಾಪ್ರಭುತ್ವದ ಗೆಲವು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಂವಿಧಾನ ಪರಿಚ್ಚೇದ ಹತ್ತರ ಅನ್ವಯ ಅವರು ಸಂವಿಧಾನದಲ್ಲಿ ತಮಗೆ ನೀಡಲಾಗಿರುವ ಪರಮೋಚ್ಚ ಅಧಿಕಾರವನ್ನು ಪ್ರಯೋಗ ಮಾಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಉಳಿಸಿದ್ದಾರೆ. ಸ್ಪೀಕರ್ ಅಧಿಕಾರದಲ್ಲಿ ಸುಪ್ರೀಂ ಕೋರ್ಟ್ ಸಹ ಹಸ್ತಕ್ಷೇಪ ಮಾಡುವಂತಿಲ್ಲವೆಂದು ಸಂವಿಧಾನ ಪೀಠವೇ ಈ ಹಿಂದೆ ತೀರ್ಪು ನೀಡಿದೆ. ಸ್ಪೀಕರ್ ತೀರ್ಪು ನ್ಯಾಯ ಸಮ್ಮತವಾಗಿದೆ ಎಂದರು. 

ಈಗ ಅನರ್ಹಗೊಂಡಿರುವ ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿ, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಶ್ರಮದ ಫಲವಾಗಿ ಅವರು ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿಯ ಆಸೆ ಅಮಿಷಗಳಿಗೆ ಬಲಿಯಾಗಿ ತಮ್ಮ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಿಕೊಂಡಿದ್ದಾರೆಂದರು. 
ಬಿ.ಎಸ್.ಯಡಿಯೂರಪ್ಪ ಅಧಿಕಾರ ದಾಹಕ್ಕೆ ಮತ್ತು ಅವರ ಕುತಂತ್ರಕ್ಕೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಲಿಯಾಗಿದ್ದಾರೆ. ರಾಜಮಾರ್ಗದಿಂದ ಅಧಿಕಾರಕ್ಕೆ ಬಂದಿಲ್ಲ. ಅವರು ವಾಮ ಮಾರ್ಗದಿಂದಲೇ ಅಧಿಕಾರಕ್ಕೆ ಬರುತ್ತಿದ್ದು, ಅವರಿಗೆ ಭವಿಷ್ಯವಿಲ್ಲವೆಂದು ತಿಳಿಸಿದರು.  

ಕಾಂಗ್ರೆಸ್ ಶಾಸಕರು ಅನರ್ಹಗೊಂಡಿರುವುದರಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಷ್ಟವೆಂದು ನಾವು ಆಂತಕ ಪಡಬೇಕು. ಆದರೆ ಇದಕ್ಕೆ ಬದಲಾಗಿ ಬಿಜೆಪಿಯವರಿಗೆ ಆಂತಕ ಜಾಸ್ತಿಯಾಗಿದೆ. ಏಕೆಂದರೆ ಅಪರೇಷನ್ ಕಮಲಕ್ಕೆ ಒಳಗಾಗಿರುವ ಶಾಸಕರ ಪರ ನಾವಿದ್ದೇವೆಂದು ನಾಟಕವನ್ನು ಬಿಜೆಪಿ ಆಡುತ್ತಿದೆ. ಸರ್ಕಾರದಲ್ಲಿರುವ ಎಲ್ಲಾ 34 ಸಚಿವ ಹುದ್ದೆಗಳು ತಮ್ಮ ಪಕ್ಷಕ್ಕೆ ಬರಲಿವೆ ಎಂದು ಸಂತಸದಲ್ಲಿರುವ ಬಿಜೆಪಿಯವರಿಗೆ ಶಾಸಕರು ಅನರ್ಹಗೊಂಡಿರುವುದು ಸಂತೋಷವಾಗಿದೆ. ಪಕ್ಷಾಂತರ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಬೇಕು. ಪಕ್ಷಾಂತರ ಮಾಡಿದ ಶಾಸಕರು ಮತ್ತು ಸಂಸದರಿಗೆ ಹತ್ತು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಕಾಯ್ದೆಗೆ ಶಕ್ತಿ ತುಂಬಬೇಕು. ಸುಪ್ರೀಂಕೋರ್ಟ್ ಇಂತಹ ಪ್ರಕರಣಗಳಿಗೆ ಜೀವ ನೀಡದೆ ನಿರ್ದಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಂಡು ಸ್ಪೀಕರ್ ತೀರ್ಮಾನಕ್ಕೆ ಮಾನ್ಯತೆ ನೀಡಬೇಕು. ಆಯಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ನೀಡುವ ಸಂವಿಧಾನ ಬದ್ಧ ಅಧಿಕಾರವನ್ನು ಮೊಟಕುಗೊಳಿಸಬಾರದು. ಸುಪ್ರೀಂ ಕೋರ್ಟ್ ಇದನ್ನು ಎತ್ತಿಹಿಡಿಯಬೇಕೆಂದು ಅವರು ಆಗ್ರಹಿಸಿದರು.   

ಜಿಲ್ಲಾ ಅಸಂಘಟಿತರ ಕಾರ್ಮಿಕರ ಜಿಲ್ಲಾಧ್ಯಕ್ಷ ಎಸ್. ಮಂಜನಾಯ್ಕ್, ಜಯಪ್ರಕಾಶ್, ಲಿಯಾಖತ್ ಅಲಿ, ಎ.ಅಬ್ದುಲ್ ಜಬ್ಬಾರ್, ಹರೀಶ್, ಸಂದೀಪ್, ಸುರಜ್, ಡಿ. ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News