ಜೈಲಿನಿಂದಲೇ ಕರೆ ಮಾಡಿ ಬೆದರಿಕೆ ಹಾಕಿದ್ದ ಬಿಜೆಪಿ ಶಾಸಕ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಆರೋಪ

Update: 2019-07-30 09:01 GMT

ಲಕ್ನೋ, ಜು.30: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಜೈಲಿನೊಳಗೆ ಇದ್ದುಕೊಂಡೇ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸೇಂಗರ್ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ ಎಂದು ರವಿವಾರದ ಭೀಕರ ಅಪಘಾತದ ನಂತರ ಆಕೆಯ ಕುಟುಂಬ ನೀಡಿರುವ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಎರಡು ವರ್ಷಗಳ ಹಿಂದೆ ಅತ್ಯಾಚಾರ ನಡೆದ ನಂತರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ಸಂದರ್ಭ, ಆರೋಪಿಯು  ಆಡಳಿತ ಬಿಜೆಪಿಯ ಶಾಸಕನಾಗಿರುವುದರಿಂದ ತಾವು ದೂರು ದಾಖಲಿಸಿದರೆ ಕೆಲಸ ಕಳೆದುಕೊಳ್ಳಬೇಕಾದೀತು.  ರಾಜಿ ಮಾಡಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದರೆಂದು ಸಂತ್ರಸ್ತೆಯ ಮಾವ ಆರೋಪಿಸಿದ್ದಾರೆನ್ನುವುದು ಎಫ್‍ಐಆರ್ ನಲ್ಲಿ ಉಲ್ಲೇಖಗೊಂಡಿದೆ.

ನಂತರ ಕುಟುಂಬಕ್ಕೆ ಜೈಲಿನಿಂದಲೇ ಕರೆ ಮಾಡಿದ ಶಾಸಕ `ಬದುಕುಳಿಯಬೇಕಾದರೆ' ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಬೇಕು ಎಂದು ಹೇಳಿದ್ದರೆಂದೂ ಅವರು ಬಹಿರಂಗಪಡಿಸಿದ್ದಾರೆ.

ಸಂತ್ರಸ್ತೆಯ ಕುಟುಂಬಕ್ಕೆ ಪ್ರಕರಣ ವಾಪಸ್ ಪಡೆಯಲು ಸತತ ಒತ್ತಡವಿತ್ತು ಹಾಗೂ ಪೊಲೀಸ್ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಗ್ರಾಮದಲ್ಲಿ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿಯ ಎದುರೇ ಆರೋಪಿ ಶಾಸಕ  ಸಂತ್ರಸ್ತೆಯ ಕುಟುಂಬಕ್ಕೆ ಕರೆ ಮಾಡಿದ್ದನೆಂಬುದೂ ಎಫ್‍ಐಆರ್ ನಲ್ಲಿ ಉಲ್ಲೇಖಗೊಡಿದೆ.

ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸದೇ ಇದ್ದರೆ ಸಾಯಬೇಕಾದೀತೆಂದು ಸೇಂಗರ್ ಸಹವರ್ತಿಗಳು ಬೆದರಿಕೆ ಹಾಕಿದ್ದರು ಹಾಗೂ ಇಡೀ ಸರಕಾರ ಆತನ ಬೆನ್ನ ಹಿಂದೆ ನಿಂತಿದೆ ಎಂದೂ ಹೇಳಿದ್ದರೆಂದು ಕುಟುಂಬ ಆರೋಪಿಸಿದೆ.

 ಪ್ರಕರಣದ ಸಹ ಆರೋಪಿಯ ಜಾಮೀನು ಅಪೀಲನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಕುಟುಂಬಕ್ಕೆ ಸೇಂಗರ್ ಮತ್ತಾನ ಸಹವರ್ತಿಗಳಿಂದ ಬೆದರಿಕೆ ಕಳೆದ  ಕೆಲ ತಿಂಗಳುಗಳಿಂದ ಹೆಚ್ಚಾಗಿತ್ತು ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ, ಆಕೆಯ ವಕೀಲ ಹಾಗೂ ಸಂಬಂಧಿಗಳಿದ್ದ ಕಾರಿಗೆ ರಾಯ್ ಬರೇಲಿ ಜಿಲ್ಲೆಯಲ್ಲಿ ಟ್ರಕ್ ಒಂದು ಢಿಕ್ಕಿ ಹೊಡೆದ ನಂತರ ಆಕೆ ಹಾಗೂ ವಕೀಲ ಗಂಭೀರ ಗಾಯಗೊಂಡು ಇಬ್ಬರು ಸಂಬಂಧಿ ಮಹಿಳೆಯರು ಮೃತಪಟ್ಟ ಘಟನೆಯ ನಂತರ ಬಿಜೆಪಿ ಶಾಸಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News