Breaking News: ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ವಿಧೇಯಕ ಅಂಗೀಕಾರ

Update: 2019-07-30 15:32 GMT

ಹೊಸದಿಲ್ಲಿ,ಜು.30: ಲೋಕಸಭೆಯು ಮೂರು ಬಾರಿ ಅಂಗೀಕರಿಸಿದ್ದ ತ್ರಿವಳಿ ತಲಾಕ್ ಮಸೂದೆಯು ಕೊನೆಗೂ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಜೆಡಿಯು ಮತ್ತು ಎಐಎಡಿಎಂಕೆಯಂತಹ ಕೆಲವು ಪಕ್ಷಗಳು ಮಸೂದೆಯನ್ನು ವಿರೋಧಿಸಿ ಮತದಾನದಿಂದ ದೂರವುಳಿದಿದ್ದು, ಅದು ಈ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ನೆರವಾಗಿತ್ತು. ಈ ಪಕ್ಷಗಳ ಸದಸ್ಯರ ಅನುಪಸ್ಥಿತಿಯಿಂದಾಗಿ 240 ಸದಸ್ಯರಿರುವ ರಾಜ್ಯಸಭೆಯ ಪರಿಣಾಮಕಾರಿ ಬಲ ಮತ್ತು ಬಹುಮತಕ್ಕೆ ಅಗತ್ಯವಿದ್ದ ಮತಗಳ ಸಂಖ್ಯೆ ಇಳಿದಿತ್ತು.

ಮಸೂದೆಯನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆ 100-84 ಮತಗಳಿಂದ ಪರಾಭವಗೊಂಡ ಬೆನ್ನಲ್ಲೇ ಸದನವು ತ್ರಿವಳಿ ತಲಾಕ್ ಮಸೂದೆಯನ್ನು ಅಂಗೀಕರಿಸಿತು.

ದಿಢೀರ್ ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸಿರುವ ಮಸೂದೆಯು ಉಲ್ಲಂಘನೆಗಾಗಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿದೆ. ಅಧ್ಯಾದೇಶವೊಂದರ ಮೂಲಕ ನಿಷೇಧವು ಈಗಾಗಲೇ ಜಾರಿಯಲ್ಲಿದೆಯಾದರೂ, ಮಸೂದೆಯ ಅಂಗೀಕಾರ ಎನ್‌ಡಿಎ ಸರಕಾರದ ಅಗ್ರ ಆದ್ಯತೆಯಾಗಿತ್ತು. ತ್ರಿವಳಿ ತಲಾಕ್ ನಿಷೇಧ ಎನ್‌ಡಿಎ ಸರಕಾರವು ಅಧಿಕಾರಕ್ಕೆ ಮರಳಿದ ಬಳಿಕ ಸಂಸತ್ತಿನಲ್ಲಿ ಮಂಡಿಸಿದ ಮೊದಲ ಮಸೂದೆಯಾಗಿತ್ತು.

ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯನ್ನು 19 ತಿಂಗಳುಗಳ ಹಿಂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತವಿಲ್ಲದ್ದರಿಂದ ಮಸೂದೆಯು ಅಲ್ಲಿ ಬಾಕಿಯಾಗಿತ್ತು.

ರಾಜ್ಯಸಭೆಯಲ್ಲಿ ಈಗಲೂ ಎನ್‌ಡಿಎಗೆ ಬಹುಮತದ ಕೊರತೆಯಿದೆ. ಆದರೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬಲ ಕಡಿಮೆಯಾಗಿರುವುದರ ಲಾಭವೆತ್ತಿದ ಬಿಜೆಪಿ ನೇತೃತ್ವದ ಸರಕಾರವು ಮಸೂದೆಯನ್ನು ಬೆಂಬಲಿಸುವಂತೆ ಇಲ್ಲವೇ ಮತದಾನದಿಂದ ದೂರವಿರುವಂತೆ ಕೆಲವು ಮಿತ್ರಪಕ್ಷಗಳನ್ನು ಮನವೊಲಿಸುವ ಮೂಲಕ ವಿವಾದಾತ್ಮಕ ಮಸೂದೆ ಅಂಗೀಕಾರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮಸೂದೆಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ವಶಿಷ್ಠ ನಾರಾಯಣ ಸಿಂಗ್(ಜೆಡಿಯು) ಅವರು,ತನ್ನ ಪಕ್ಷವು ಮಸೂದೆಯನ್ನು ವಿರೋಧಿಸುತ್ತದೆ ಮತ್ತು ಅದನ್ನು ಬಹಿಷ್ಕರಿಸುತ್ತದೆ ಎಂದು ಹೇಳಿದರು.

ತನ್ನ ಸಂಸದ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಟೀಕೆಗಳಿಗೆ ಗುರಿಯಾಗಿದ್ದ ಎಐಎಡಿಎಂಕೆ ಈ ಬಾರಿ ಮಸೂದೆಯನ್ನು ಬಲವಾಗಿ ವಿರೋಧಿಸಿತು. ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಆಗ್ರಹಿಸಿದ್ದ ಎಐಎಡಿಎಂಕೆಯ ಸದನ ನಾಯಕ ಎ.ನವನೀತಕೃಷ್ಣನ್ ಅವರು ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ತನ್ನ ಪಕ್ಷವು ಮಸೂದೆಗೆ ವಿರುದ್ಧವಾಗಿರುವುದರಿಂದ ಮತದಾನದ ಸಂದರ್ಭದಲ್ಲಿ ಸಭಾತ್ಯಾಗ ನಡೆಸಿತು ಎಂದು ತಿಳಿಸಿದರು.

ಹಿಂದೆ ಮಸೂದೆಯನ್ನು ವಿರೋಧಿಸಿದ್ದ ನವೀನ್ ಪಟ್ನಾಯಕ್ ಅವರ ಬಿಜೆಡಿ ಮಂಗಳವಾರ ಅದನ್ನು ಬೆಂಬಲಿಸಿತು.

ಇದಕ್ಕೂ ಮುನ್ನ ಮಸೂದೆಯ ಮೇಲಿನ ಚರ್ಚೆಗೆ ಚಾಲನೆ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ ಅವರು,ಸದಸ್ಯರು ಈ ಮಸೂದೆಯನ್ನು ರಾಜಕೀಯ ಅಥವಾ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡಬಾರದು ಎಂದು ಒತ್ತಿ ಹೇಳಿದರು.

 ತಾನು ಮಸೂದೆಯನ್ನು ಬೆಂಬಲಿಸುತ್ತೇನೆ,ಆದರೆ ಅದರಲ್ಲಿಯ ಅಪರಾಧೀಕರಣದ ಕೋನವನ್ನು ಒಪ್ಪುವುದಿಲ್ಲ ಎಂದು ಹೇಳಿದ ಕಾಂಗ್ರೆಸ್ ಸದಸ್ಯೆ ಅಮೀ ಯಾಜ್ನಿಕ್ ಅವರು, ವಿವಾದಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಪ್ಪಿಸದೆ ಮಹಿಳೆಯ ಘನತೆಯ ಹಿತಾಸಕ್ತಿಯಲ್ಲಿ ಕುಟುಂಬ ನ್ಯಾಯಾಲಯಕ್ಕೆ ವಹಿಸಬೇಕು ಎಂದರು.

ತನ್ನ ಸದಸ್ಯರ ಬಲದಿಂದಾಗಿ ಕಾಂಗ್ರೆಸ ಪಕ್ಷವು ಹೇಗೆ ಸದನವನ್ನು ಹೈಜಾಕ್ ಮಾಡಿತ್ತು ಮತ್ತು ಮಸೂದೆಗೆ ತಡೆಯೊಡ್ಡಿತ್ತು ಎನ್ನುವುದನ್ನು ನೆನಪಿಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ ಅಬ್ಬಾಸ್ ನಕ್ವಿ ಅವರು ರಾಜ್ಯಸಭೆಯಲ್ಲಿ ಬದಲಾಗುತ್ತಿರುವ ಅಧಿಕಾರ ಸಮೀಕರಣವನ್ನು ಪರೋಕ್ಷವಾಗಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News