ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಕಾರಿಗೆ ಟ್ರಕ್ ಢಿಕ್ಕಿ: ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಪ್ರತಿಭಟನೆ

Update: 2019-07-30 17:12 GMT

ಹೊಸದಿಲ್ಲಿ, ಜು. 30: ಉನ್ನಾವೊ ಅತ್ಯಾಚಾರ ಸಂತ್ರಸ್ತೆ, ಅವರ ವಕೀಲ ಗಂಭೀರ ಗಾಯಗೊಂಡಿರುವ ಹಾಗೂ ಅವರ ಇಬ್ಬರು ಅತ್ತೆಯಂದಿರು ಮೃತಪಟ್ಟಿರುವ ರಸ್ತೆ ಅಪಘಾತದ ಕುರಿತಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು ಹಾಗೂ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ನಡೆಯುತ್ತಿದ್ದಂತೆ ಆಡಳಿತಾರೂಢ ಬಿಜೆಪಿ, ಯುವತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ನೀಡಲು ಉತ್ತರ ಪ್ರದೇಶ ಸರಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರತಿಪಾದಿಸಿದರು ಹಾಗೂ ಘಟನೆಯನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿದರು. ಲೋಕಸಭೆಯಲ್ಲಿ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದರು. ತೃಣಮೂಲ ಕಾಂಗ್ರೆಸ್, ಡಿಎಂಕೆ, ಬಿಎಸ್‌ಪಿ ಹಾಗೂ ಇತರ ಪಕ್ಷಗಳ ಸದಸ್ಯರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

 ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಎಸ್‌ಪಿ ಹಾಗೂ ಡಿಎಂಕೆ ಸದಸ್ಯರು ಸಭಾ ತ್ಯಾಗ ಮಾಡಿದರು. ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಎರಡು ಬಾರಿ ಸಭಾ ತ್ಯಾಗ ಮಾಡಿದರು. ಕಾಂಗ್ರೆಸ್‌ನವರೇ ಹೆಚ್ಚಿದ್ದ 30ಕ್ಕೂ ಅಧಿಕ ಸದಸ್ಯರು ಸದನದ ಬಾವಿಗೆ ಇಳಿದು ಸುಮಾರು 40 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ಅಲ್ಲದೆ ‘‘ನಮಗೆ ನ್ಯಾಯ ಬೇಕು’’ ಎಂದು ಘೋಷಣೆಗಳನ್ನು ಕೂಗಿದರು. ಲೋಕಸಭೆಯಲ್ಲಿ ಅಪಘಾತದ ವಿಷಯ ಎತ್ತಿದ ಅಧೀರ್ ರಂಜನ್ ಚೌಧರಿ, ಇದು ಅವಮಾನಕಾರಿ ಎಂದರು. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದರು.

ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು. ಪ್ರತಿಭಟನೆ ನಡೆಸುತ್ತಿರುವ ಸದಸ್ಯರಲ್ಲಿ ಘಟನೆಯನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ನ್ಯಾಯ ನೀಡಲು ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು. ಯುವತಿ, ಆಕೆಯ ಕುಟುಂಬ ಹಾಗೂ ವಕೀಲರು ತೆರಳುತ್ತಿದ್ದ ಕಾರಿಗೆ ಢಿಕ್ಕಿಯಾದ ಟ್ರಕ್ ಸಮಾಜವಾದಿ ಪಕ್ಷದ ನಾಯಕರಿಗೆ ಸೇರಿರುವುದು. ಕಾಂಗ್ರೆಸ್ ಆರೋಪಿಸುವ ಮೂಲಕ ಬಿಜೆಪಿಯ ಗೌರವಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕಿ ಜಗದಾಂಬಿಕೆ ಪಾಲ್ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News