ಐಎಂಎ ಹಗರಣ: ಐಜಿಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ

Update: 2019-07-30 17:58 GMT
ಹೇಮಂತ್ ನಿಂಬಾಳ್ಕರ್

ಬೆಂಗಳೂರು, ಜು.30: ಐಎಂಎ ಹಗರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ದೇಶ ಬಿಟ್ಟು ಹೋಗಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಅಪರಾಧ ತನಿಖಾ ವಿಭಾಗದ ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧ ದಳದ ಐಜಿಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ.

ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಸಾರ್ವಜನಿಕರಿಗೆ ಸಾವಿರಾರು ಕೋಟಿ ವಂಚಿಸಿ, ದೇಶ ಬಿಟ್ಟು ಹೋಗಲು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ಸಹಾಯ ಮಾಡಿದ್ದಾರೆ. ನಿಂಬಾಳ್ಕರ್ ವಿರುದ್ಧದ ಆರೋಪ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆದರೆ ಸಾರ್ವಜನಿಕರ ಸಾವಿರಾರು ಕೋಟಿ ಹಣ ವಾಪಸ್ ಸಿಗಲಿದೆ. ಹೀಗಾಗಿ, ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ನಿಂಬಾಳ್ಕರ್ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಆರ್. ಐಯ್ಯರ್ ಮತ್ತು ಬಿ.ಕೆ.ಪ್ರಕಾಶ್‌ಬಾಬು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

ಎಸ್‌ಐಟಿಯೂ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ತನ್ನದೆ ಸಂಸ್ಥೆಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಈ ಹಗರಣದಲ್ಲಿ ವಿಚಾರಣೆ ಮಾಡಲು ಎಸ್‌ಐಟಿ ಹಿಂದೇಟು ಹಾಕುತ್ತಿದೆ. ಅಪರಾಧ ಸಂಬಂಧ ತನಿಖೆ ನಡೆಸಲು ತಂಡಕ್ಕೆ ವಿಶೇಷ ಅವಕಾಶದ ಜೊತೆಗೆ ಸಂಘಟನಾತ್ಮಕ ಸಾಮರ್ಥ್ಯ ನೀಡಿದಾಗ ಈ ವಿಚಾರವಾಗಿ ತಂಡ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News