ನೂತನ ಸಚಿವ ಸಂಪುಟದಲ್ಲಿ ಸಿನಿಮಾ ರಂಗದವರಿಗೆ ಮಂತ್ರಿ ಸ್ಥಾನದ ನಿರೀಕ್ಷೆ

Update: 2019-07-30 18:25 GMT

ಬೆಂಗಳೂರು, ಜು.30: ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಿನಿಮಾ ರಂಗದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲಿ ಎಷ್ಟು ಜನರಿಗೆ ಮಂತ್ರಿ ಪದವಿ ಸಿಗುತ್ತದೆ ಎಂಬ ಕುತೂಹಲ ಈಗ ಎಲ್ಲೆಡೆ ಕೇಳಿಬರುತ್ತಿದೆ.

ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಡಾ. ಜಯಮಾಲ ಸಚಿವರಾಗಿದ್ದರು. ಅದೇ ರೀತಿ ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ಉಮಾಶ್ರೀ ಸಚಿವರಾಗಿದ್ದರು. ಅದರಂತೆ ಯಡಿಯೂರಪ್ಪರ ಮಂತ್ರಿ ಮಂಡಲದಲ್ಲಿಯೂ ಸಿನಿಮಾ ಕ್ಷೇತ್ರದವರಿಗೆ ಅವಕಾಶ ಸಿಗುತ್ತದೆಯಾ ಎಂಬುದು ಪ್ರಶ್ನೆಯಾಗಿದೆ.

17 ಅನರ್ಹ ಶಾಸಕರ ಪಟ್ಟಿಯಲ್ಲಿ ನಿರ್ಮಾಪಕ ಮುನಿರತ್ನ ಹಾಗೂ ನಟ, ನಿರ್ದೇಶಕ, ನಿರ್ಮಾಪಕ ಬಿ.ಸಿ. ಪಾಟೀಲ್ ಇದ್ದಾರೆ. ಇವರಿಬ್ಬರು ಬಿಜೆಪಿ ಸೇರಿದ ಮೇಲೆ ಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಅವರಿಬ್ಬರು ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಬಿಜೆಪಿಯಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದ ನಟ ಜಗ್ಗೇಶ್ ಈ ಹಿಂದೆ ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಹಾಗೂ ಎಂಎಲ್ಸಿ ಆಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಯಶವಂತಪುರ ವಿಧಾನಸಭೆಯಿಂದ ಸ್ಪರ್ಧಿಸಿ ಸೋತಿದ್ದರು.

ಮಹಿಳೆಯರ ಪೈಕಿ ತಾರಾ ಅನುರಾಧ, ಶ್ರುತಿ, ಮಾಳವಿಕ ಅವಿನಾಶ್, ಶಿಲ್ಪಾಗಣೇಶ್, ಭಾವನಾ ಕೆಲವು ವರ್ಷಗಳಿಂದ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ತಾರಾ ಎಂಎಲ್ಸಿ ಮಾತ್ರವಲ್ಲದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಕೂಡಾ ಆಗಿದ್ದರು. ಆದರೆ ಉಳಿದವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದೀಗ ಶ್ರುತಿ, ಮಾಳವಿಕ ಹಾಗೂ ಶಿಲ್ಪಾಗಣೇಶ್‌ಗೆ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷೆ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News