ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಎಸ್.ಎಂ.ಜಾಮದಾರ್ ಧೈರ್ಯವಿದ್ದರೆ ಚರ್ಚೆಗೆ ಬರಲಿ-ಪೇಜಾವರ ಶ್ರೀ ಸವಾಲು

Update: 2019-07-30 18:47 GMT

ಮೈಸೂರು, ಜು.30: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಧೈರ್ಯವಿದ್ದರೆ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸವಾಲು ಹಾಕಿದರು.

ನಗರದ ಕೃಷ್ಣ ಮಠದಲ್ಲಿ ಚಾತುವ್ರತ ಆರಂಭಿಸಿರುವ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಲಿಂಗಾಯತ ಧರ್ಮ ಕೂಡ ಹಿಂದೂ ಧರ್ಮಕ್ಕೆ ಸೇರಿದ್ದಾಗಿದೆ. ಈ ಬಗ್ಗೆ ಚರ್ಚೆಗೆ ನಾನು ಸಿದ್ದ, ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎಂದು ಹೇಳುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರಿಗೆ ಧೈರ್ಯವಿದ್ದರೆ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಲಿಂಗಾಯತ ಧರ್ಮದ ವಿಚಾರವಾಗಿ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ ಎಂದು ಹೇಳಿದ್ದರು. ನಾನು ಉಡುಪಿಗೆ ಬನ್ನಿ ಎಂದಿದ್ದೆ. ಈಗ ಎರಡು ತಿಂಗಳ ಕಾಲ ಮೈಸೂರಿನಲ್ಲಿಯೇ ಇರುತ್ತೇನೆ. ಅವರಿಗೆ ಅನುಕೂಲವಾದಾಗ ಮೈಸೂರಿಗೆ ಬಂದು ಶಾಂತವಾತಾವರಣದಲ್ಲಿ ಸಂವಾದ ನಡೆಸಲಿ. ವೀರಶೈಬ ಮತ್ತು ಲಿಂಗಾಯತರು ಹಿಂದೂಗಳೇ ಎಂದು ಹೇಳಿದರು.

ಶೈವರು, ವೈಷ್ಣವರು, ಹಿಂದೂಗಳಲ್ಲದಿದ್ದರೆ ಯಾರು ಹಿಂದೂಗಳೂ? ಶಿವನೇ ಸರ್ವೋತ್ತಮ, ಶಿವನ ಪಂಚಾಕ್ಷರಿ ಮಂತ್ರವನ್ನು ಎಲ್ಲರೂ ಜಪಿಸುತ್ತಾರೆ. ಶಿವನನ್ನು ಒಪ್ಪಿದ ಮೇಲೆ ಹಿಂದೂಗಳಲ್ಲ ಎಂದು ಹೇಳಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ನಿಮಗೇನು ಅಧಿಕಾರವಿದೆ ಎಂದು ಕೆಲವರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಸಹೋದರರೆಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ಇರಿ ಎಂದು ಹೇಳುತ್ತೇನೆ. ಬೇರೆ ಮನೆಗೆ ಹೋಗುತ್ತೇನೆ ಎಂದರೆ ಹೋಗು ಎನ್ನಲು ಸಾಧ್ಯವೆ ಎಂದು ಹೇಳಿದರು.

ನಾನು 1955 ರಿಂದಲು ಅನೇಕ ಲಿಂಗಾಯತ, ವೀರಶೈವ ಮಠಾಧೀಶರು ಸ್ನೇಹ ಸಂಪರ್ಕವನ್ನು ಹೊಂದಿದ್ದೇನೆ. ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತಾಯಿಸುತ್ತಿರುವ ಸಾಣೆಹಳ್ಳಿ ಸ್ವಾಮೀಜಿ, ಎಸ್.ಎಂ.ಜಾಮದಾರ್, ಎಂ.ಬಿ.ಪಾಟೀಲ್ ಚರ್ಚೆಗೆ ಬರಲಿ. ಉತ್ತರ ಕೊಡಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News