ಸಾಲಬಾಧೆಗೆ ಬೇಸತ್ತು ಇಬ್ಬರು ರೈತರು ಆತ್ಮಹತ್ಯೆ

Update: 2019-07-30 18:51 GMT

ಮಂಡ್ಯ, ಜು.30: ಜಿಲ್ಲೆಯಲ್ಲಿ ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಮಂಗಳವಾರ ಇಬ್ಬರು ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದ ಶಿವರಾಮು ಅವರ ಪುತ್ರ ಯೋಗೇಶ್ ಹಾಗೂ ಕೆ.ಆರ್.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದ ರಾಜೇಗೌಡ(60) ಆತ್ಮಹತ್ಯೆ ಮಾಡಿಕೊಂಡವರು.

ಯೋಗೇಶ್ 2 ಎಕರೆ ಪ್ರದೇಶದಲ್ಲಿ ರೇಷ್ಮೆ, ಭತ್ತದ ಬೆಳೆ ಬೆಳೆಯಲು ಕೈ ಸಾಲ 3 ಲಕ್ಷ, ಸ್ವ ಸಹಾಯ ಸಂಘದಲ್ಲಿ 50 ಸಾವಿರ, ಬೆಸಗರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ಮಾಡಿಕೊಂಡಿದ್ದರು ಎನ್ನಲಾಗಿದೆ.

ನೀರಿಲ್ಲದೆ ಬೆಳೆಗಳು ಒಣಗಿದ್ದರಿಂದ ಹಾಗೂ ಸಾಲಗಾರರ ಕಾಟ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಜಯಲಕ್ಷ್ಮಮ್ಮ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜೇಗೌಡ ಸುಮಾರು 3 ಎಕರೆ ಜಮೀನು ಹೊಂದ್ದು, ಬೇಸಾಯಕ್ಕಾಗಿ ಆಲೇನಹಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ರೂ., 4 ಲಕ್ಷ ರೂ. ಕೈಸಾಲ ಮಾಡಿದ್ದರು. ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದಿತ್ತು. ಹಾಗಾಗಿ ಜಮೀನು ಬಳಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News