ವಿಧಾನಸಭೆಯ ನೂತನ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ

Update: 2019-07-31 12:21 GMT

ಬೆಂಗಳೂರು, ಜು. 31: ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದರು.

ಅದರನ್ವಯ ಸಿಎಂ ಯಡಿಯೂರಪ್ಪ, ಕಾಗೇರಿ ಅವರ ಹೆಸರನ್ನು ಸೂಚಿಸಿದರೆ, ಹಿರಿಯ ಸದಸ್ಯ ಬಸವರಾಜ ಬೊಮ್ಮಾಯಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದರು. ಅನಂತರ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರಕಿತು.

ಆ ಬಳಿಕ ಸ್ಪೀಕರ್ ಆಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿದ ಕೃಷ್ಣಾರೆಡ್ಡಿ, ಕಾಗೇರಿ ಅವರನ್ನು ಸ್ಪೀಕರ್ ಪೀಠಕ್ಕೆ ಕರೆತರುವಂತೆ ಸಿಎಂ ಯಡಿಯೂಪ್ಪ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯರಿಗೆ ಸೂಚಿಸಿದರು. ಉಭಯ ನಾಯಕರು ಸ್ಪೀಕರ್ ಕಾಗೇರಿ ಅವರನ್ನು ಪೀಠಕ್ಕೆ ಕರೆತಂದು ಕೂರಿಸಿ ಅಭಿನಂದಿಸಿದರು.

ಇತ್ತೀಚಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಆರ್.ರಮೇಶ್ ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

ಘನತೆ ಎತ್ತಿಹಿಡಿಯಲಿ: ನೂತನ ಸ್ಪೀಕರ್ ಕಾಗೇರಿ ಅವರನ್ನು ಅಭಿನಂದಿಸಿ ಮಾತನಾಡಿದ ಯಡಿಯೂರಪ್ಪ, ಅತ್ಯಂತ ಅರ್ಹ ವ್ಯಕ್ತಿಗೆ ಸ್ಪೀಕರ್ ಸ್ಥಾನ ಸಿಕ್ಕಿದ್ದು, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ವಿಪಕ್ಷ ನಾಯಕರು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಎಬಿವಿಪಿ ಕಾರ್ಯಕರ್ತರಾಗಿ ಹಲವು ಹೋರಾಟಗಳಲ್ಲಿ ಭಾಗಿಯಾಗಿ ಜನರ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ 6 ಬಾರಿ ಶಿರಸಿ ಹಾಗೂ ಅಂಕೋಲ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಿಕ್ಷಣ ಸಚಿವರಾಗಿ ಹಲವು ಸುಧಾರಣೆ ತಂದಿದ್ದಾರೆ. ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ. ಸರಳ, ಸಜ್ಜನಿಕೆ ವ್ಯಕ್ತಿತ್ವವುಳ್ಳ ಅವರು ಸದನದ ಘನತೆ ಎತ್ತಿಹಿಡಿಯುವ ವಿಶ್ವಾಸವಿದೆ ಎಂದು ಬಿಎಸ್‌ವೈ ತಿಳಿಸಿದರು.

ಈಗ ಆ ಸೋಂಕು ಇಲ್ಲ: ‘ನೀವು ಎಬಿವಿಪಿ, ಆರೆಸೆಸ್ಸ್, ಬಿಜೆಪಿ ಮೂಲದಿಂದ ಬಂದಿದ್ದರೂ ಸ್ಪೀಕರ್ ಆಗಿರುವ ನಿಮಗೆ ಈಗ ಆ ಸೋಂಕು ಇಲ್ಲ. ನೀವು ಪಕ್ಷಾತೀತ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳುವ ದೃಷ್ಟಿಯಿಂದ ಸದನದ ಘನತೆ-ಗೌರವ ಎತ್ತಿಹಿಡಿಯವ ಕೆಲಸವನ್ನು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಜನರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುವ ನಿಟ್ಟಿನಲ್ಲಿ ವಿಪಕ್ಷಗಳ ಅಭಿಪ್ರಾಯ ಮುಖ್ಯ. ಸ್ಪೀಕರ್ ವಿಪಕ್ಷಗಳ ಸದಸ್ಯರ ಪಕ್ಷಪಾತಿಯಾಗಿರಬೇಕು. ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಓರೆ-ಕೊರೆಗಳನ್ನು ಸರಿಪಡಿಸಲು ನೆರವಾಗಬೇಕು ಎಂದು ಸಿದ್ದರಾಮಯ್ಯ ಕೋರಿದರು.

ಸ್ಪೀಕರ್ ಪೀಠ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ಕ್ಷಿಣಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದನ್ನು ಹೋಗಲಾಡಿಸಲು ಸಂಸದೀಯ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಸದನದಲ್ಲಿ ಗುಣಮಟ್ಟದ ಚರ್ಚೆಗಳಾಗಬೇಕು ಎಂದು ಅವರು ಅಪೇಕ್ಷೆಪಟ್ಟರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ವರ್ಷಕ್ಕೆ ಕನಿಷ್ಠ 60ದಿನ ಅಧಿವೇಶನ ನಡೆಯಬೇಕೆಂಬ ಕಾನೂನು ಮಾಡಿದ್ದು, ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ಹೆಚ್ಚು ದಿನ ಸದನ ನಡೆಸಬೇಕು ಎಂದು ಕೋರಿದರು.

ಮಾಜಿ ಸ್ಪೀಕರ್ ರಮೇಶ್‌ ಕುಮಾರ್, ಆರ್.ವಿ.ದೇಶಪಾಂಡೆ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಕೃಷ್ಣಬೈರೇಗೌಡ, ಶಿವಲಿಂಗೇಗೌಡ, ಗೋವಿಂದ ಕಾರಜೋಳ, ಬಿಎಸ್ಪಿ ಸದಸ್ಯ ಎನ್.ಮಹೇಶ್ ಸೇರಿದಂತೆ ಹಲವು ಸದಸ್ಯರು ಸ್ಪೀಕರ್ ಅವರ ಸರಳ-ಸಜ್ಜನಿಕೆ ವ್ಯಕ್ತಿತ್ವವನ್ನು ಸ್ಮರಿಸಿ, ಸದನದ ಘನತೆ-ಗೌರವ ಎತ್ತಿಹಿಡಿಯಬೇಕೆಂದು ಮನವಿ ಮಾಡಿದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಪರಸ್ಪರ ದೋಷಾರೋಪ ಬಿಟ್ಟು ಸಮಾಜದ ಒಳಿತಿಗೆ ಕೆಲಸ ಮಾಡಬೇಕು. ಜನರ ಸಂಕಷ್ಟಕ್ಕೆ ಸದನ ಧ್ವನಿಯಾಗಬೇಕು. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವ-ಸಂವಿಧಾನದ ಚೌಕಟ್ಟಿನಲ್ಲಿ ಬದ್ಧತೆಯಿಂದ ನಿಮ್ಮೆಲ್ಲರ ಸಹಕಾರದಿಂದ ನಾನು ಕೆಲಸ ನಿರ್ವಹಿಸುತ್ತೇನೆ ಎಂಬ ವಿಶ್ವಾಸವಿದೆ’

-ವಿಶ್ವೇಶ್ವರ ಹೆಗಡೆ ಕಾಗೇರಿ, ನೂತನ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News