ಚಿಕ್ಕಮಗಳೂರು ತಲುಪಿದ ಸಿದ್ದಾರ್ಥ ಮೃತದೇಹ: ಮುಗಿಲುಮುಟ್ಟಿದ ಆಕ್ರಂದನ

Update: 2019-07-31 09:42 GMT

ಚಿಕ್ಕಮಗಳೂರು, ಜು.31: ಜಿಲ್ಲೆಯ ಕಾಫಿ ಉದ್ಯಮ ಹಾಗೂ ನಾಡಿನ ಹಲವು ಉದ್ಯಮಗಳ ಸ್ಥಾಪಕ, ‘ಕೆಫೆ ಕಾಫಿ ಡೇ’ ಸಿದ್ದಾರ್ಥ್ ಅವರ ಮೃತದೇಹ ಚಿಕ್ಕಮಗಳೂರಿಗೆ ತಲುಪಿದೆ.

ಬಿಗಿ ಪೊಲಿಸ್ ಭದ್ರತೆಯಲ್ಲಿ ಸಿದ್ದಾರ್ಥ ಅವರ ಮೃತದೇಹವನ್ನು ಕಾಫಿ ಡೇ ಕಂಪೆನಿ ಆವರಣಕ್ಕೆ ತರುತ್ತಿದ್ದಂತೆ ಸ್ಥಳದಲ್ಲಿದ್ದ ಸಿದ್ದಾರ್ಥ ಒಡೆತನದ ಹಲವು ಸಂಸ್ಥೆಗಳ ಸಾವಿರಾರು ಸಿಬ್ಬಂದಿ, ಕಾರ್ಮಿಕರು, ಕುಟುಂಬ ಸದಸ್ಯರ ಹಾಗೂ ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಫಿ ಕಂಪೆನಿಯ ಸಿಬ್ಬಂದಿ, ಕಾರ್ಮಿಕರು ಅಳಲಾರಂಭಿಸಿದರು.

ಮೃತದೇಹವನ್ನು ಶವಪೆಟ್ಟಿಗೆಯಲ್ಲಿರಿಸಿದ ಬಳಿಕ ತಾಯಿ ವಾಸಂತಿ, ಪತ್ನಿ ಮಾಳವಿಕ ಮೃತದೇಹದ ಮುಂದೆ ಗದ್ಗದಿತರಾದರು. ನಂತರ ಒಕ್ಕಲಿಗ ವಿಧಿ-ವಿಧಾನಗಳಂತೆ ಪೂಜೆ ಸಲ್ಲಿಸಲಾಯಿತು. ಮಾವ ಎಸ್ಎಂ ಕೃಷ್ಣ, ಮಾಜಿ ಸಚಿವ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಧರ್ಮೇಗೌಡ, ಶಾಸಕರಾದ ರಾಜೇಗೌಡ, ಎಂ.ಪಿ.ಕುಮಾರಸ್ವಾಮಿ, ಸಿಟಿ ರವಿ. ಡಿ ಎಸ್ ಸುರೇಶ್, ಬೆಳ್ಳಿಪ್ರಕಾಶ್, ಮಾಜಿ ಸಚಿವರಾದ ಮೋಟಮ್ಮ, ಬಿ ಬಿ ನಿಂಗಯ್ಯ, ಬಿ.ಎಲ್.ಶಂಕರ್ ಸೇರಿದಂತೆ ಪ್ರಮುಖ ರಾಜಕಾರಣಿಗಳು, ಸಾರ್ವಜನಿಕರು, ಸಿಬ್ಬಂದಿ, ಕಾರ್ಮಿಕರು, ಶಾಲಾ ಕಾಲೇಜು ಮಕ್ಕಳು ಅಂತಿಮ ದರ್ಶನ ಪಡೆದರು.

ಸಾರ್ವಜನಿಕರ ದರ್ಶನದ ಬಳಿಕ  ಪಾರ್ಥಿವ ಶರೀರವನ್ನು ಸಿದ್ದಾರ್ಥ ಅವರ ಹುಟ್ಟೂರು ಚಟ್ನಳ್ಳಿ ಗ್ರಾಮದಲ್ಲಿರುವ ಚೇತನ ಎಸ್ಟೇಟ್ ಗೆ ಕೊಂಡೊಯ್ಯಲಾಗುವುದು. ಪಾರ್ಥಿವ ಶರೀರ ಜಿಲ್ಲೆಯ ಗಡಿಯಾದ ಕೊಟ್ಟಿಗೆಹಾರ ಹಾಗೂ ಬಣಕಲ್, ಮೂಡಿಗೆರೆ ಪಟ್ಟಣ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಜನತೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಸ್ತೆ ಬದಿಯ ಎರಡು ಬದಿಯಲ್ಲಿ ನಿಂತು ‘ಸಿದ್ದಾರ್ಥ ಅಮರ್ ರಹೇ’ ಘೋಷಣೆ ಕೂಗಿ ಗೌರವ ಸೂಚಿದರು.

ಕಾಫಿ ಕಂಪೆನಿ‌ ಆವರಣದೊಳಗೆ ಸುಮಾರು 5000 ಜನರು ಜಮಾಯಿಸಿದ್ದು, ಪೊಲೀಸರು ಭಾರಿ ಬದ್ರತೆ ಒದಗಿಸಿದ್ದಾರೆ. ಎಸ್ಪಿ ಹರೀಶ್ ಪಾಂಡೆ ಸ್ಥಳದಲ್ಲೇ ಇದ್ದು ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News