ಹೇಮಂತ್ ಕರ್ಕರೆಗೆ ಗೌರವ ಸಲ್ಲಿಸಲು ಸಾಧ್ಯವಿಲ್ಲ ಎಂದ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್

Update: 2019-08-01 09:42 GMT
ಇಂದ್ರೇಶ್ ಕುಮಾರ್

ಭೋಪಾಲ್ : ''ಉಗ್ರ ದಾಳಿಯಲ್ಲಿ ಹತರಾದ ಹೇಮಂತ್ ಕರ್ಕರೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು ಆದರೆ ಅವರಿಗೆ ಗೌರವ ನೀಡಲು ಸಾಧ್ಯವಿಲ್ಲ'' ಎಂದು ಹೇಳುವ ಮೂಲಕ ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ವಿವಾದಕ್ಕೀಡಾಗಿದ್ದಾರೆ.

''ಬಲಿದಾನವನ್ನು ಗೌರವಿಸಲಾಗುತ್ತದೆ, ಅದೇ ಸಮಯ ಕರ್ಕರೆ ಅವರು ನಡೆಸಿದ ದೌರ್ಜನ್ಯವನ್ನೂ ಎತ್ತಿ ತೋರಿಸಬೇಕಾಗುತ್ತದೆ,'' ಎಂದೂ ಅವರು ಹೇಳಿದ್ದಾರೆ.

''ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್ ಅವರ ಆರೋಪ ಇನ್ನೂ ಸಾಬೀತಾಗದೇ ಇದ್ದರೂ ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರ 'ಸಮವಸ್ತ್ರ'ವನ್ನು ಬಳಸಿ ಆಕೆಯ ಮೇಲೆ ದೌರ್ಜನ್ಯವೆಸಗಿದೆ. ಇದು ಸರಿಯಲ್ಲ, ಅವರು ಹಾಗೆ ಮಾಡಬಾರದಾಗಿತ್ತು,'' ಎಂದರು.

''ಆಕೆ (ಪ್ರಜ್ಞಾ ಠಾಕೂರ್) ತನ್ನ ಕರ್ಕರೆ ಕುರಿತಾದ ಹೇಳಿಕೆ ಆಕ್ರೋಶಕ್ಕೀಡಾದ ನಂತರ ಅದನ್ನು ತಿದ್ದಿ ಮಾನವೀಯತೆ ಮೆರೆದಿರುವುದನ್ನು ನಾವು  ಒಪ್ಪಿಕೊಳ್ಳಬೇಕು,'' ಎಂದೂ ಇಂದ್ರೇಶ್ ಕುಮಾರ್ ಹೇಳಿದರು.

ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಕರ್ಕರೆ  ತಮ್ಮ ಶಾಪದಿಂದಾಗಿ ಉಗ್ರ ದಾಳಿಗೆ ಬಲಿಯಾಗಿದ್ದರೆಂದು ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹೇಳಿ ಪ್ರಜ್ಞಾ ಠಾಕೂರ್ ದೇಶಾದ್ಯಂತ ಆಕ್ರೋಶ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

''ಕಸ್ಟಡಿಯಲ್ಲಿರುವಾಗ ತಮಗಾದ ಹಿಂಸೆಯಿಂದಾಗಿ ಆಕೆ ಕರ್ಕರೆಗೆ ಶಾಪ ನೀಡಿದ್ದರು, ಆದರೆ ಆಕೆ ತನ್ನ ಹೇಳಿಕೆಯನ್ನು ಸರಿ ಪಡಿಸಿದ ನಂತರವೂ  ಅದೇ ವಿಚಾರವನ್ನು ನೀವು (ಮಾಧ್ಯಮ) ಎತ್ತುತ್ತಲೇ ಬಂದಿದ್ದೀರಿ'' ಎಂದು ಹೇಳುವ ಮೂಲಕ  ಇದರ ಹಿಂದೆ ಏನಾದರೂ ಅಜೆಂಡಾ ಇದೆಯೇ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News