ಶಿಕ್ಷಕ ಜೆ.ವಿ.ಕೃಷ್ಣಮೂರ್ತಿರಿಗೆ ಶಿಕ್ಷಕರು, ವಿದ್ಯಾರ್ಥಿಗಳು,ವಿವಿಧ ಸಂಘ ಸಂಸ್ಥೆಗಳಿಂದ ಬೀಳ್ಕೊಡುಗೆ

Update: 2019-08-01 18:31 GMT

ಕೋಲಾರ: ನಗರದ ಬಾಲಕರ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ 37 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಜೆ.ವಿ.ಕೃಷ್ಣಮೂರ್ತಿ ಅವರನ್ನು ಶಿಕ್ಷಕರು,ವಿದ್ಯಾರ್ಥಿಗಳು, ನೌಕರರ ಸಂಘದ ನಿರ್ಗಮಿತ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮತ್ತಿತರರು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಕಾಲೇಜಿನ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಶಿಕ್ಷಕ ವೃತ್ತಿಗಿಂತ ಶ್ರೇಷ್ಟವಾದ ವೃತ್ತಿ ಮತ್ತೊಂದಿಲ್ಲ, ಇಲ್ಲಿ ನಿವೃತ್ತರಾದ ನಂತರವೂ ನಮ್ಮ ಗುರುಗಳು ಎಂದು ಗುರುತಿಸುವ ಅನೇಕ ಶಿಷ್ಯ ವೃಂದ ಇರುತ್ತದೆ ಎಂದರು.

ಶಿಕ್ಷಕ ತನ್ನ ಜೀವನ ಪೂರ್ತಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ  ಮೂಲಕ ದೇಶ ಕಟ್ಟವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾನೆ, ಸಮಾಜಕ್ಕೆ ಸುಶೀಕ್ಷಿತ ಮಾನವ ಸಂಪನ್ಮೂಲ ನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಮುಖ್ಯಪಾತ್ರ ವಹಿಸುತ್ತಾರೆ ಎಂದರು.

ಶಿಕ್ಷಕ ವೃತ್ತಿಯಲ್ಲಿ ನಮ್ಮನ್ನು ನಂಬಿ ಶಾಲೆಗೆ ಬರುವ ಮಕ್ಕಳಿಗೆ ನಾವು ಉತ್ತಮ ಶಿಕ್ಷಣ ನೀಡಿದಲ್ಲಿ ಅದು ನಮ್ಮ ನಿವೃತ್ತಿ ಜೀವನದಲ್ಲೂ ನಮ್ಮನ್ನು ಸ್ಮರಿಸುವಂತೆ ಮಾಡುತ್ತದೆ, ವೃತ್ತಿಗೆ ದ್ರೋಹ ಮಾಡದೇ ಮಾಡುವ ದುಡಿಮೆಗೆ ಗೌರವ ಇದ್ದೇ ಇರುತ್ತದೆ ಎಂದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಶಿಕ್ಷಕರಿಗೆ ಸುಧೀರ್ಘ ಸೇವೆಯ ನಂತರ ನಿವೃತ್ತರಾಗುತ್ತಿರುವ ಜೆ.ವಿ.ಕೃಷ್ಣಮೂರ್ತಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ, ನಿವೃತ್ತಿಯ ನಂತರವೂ ಮತ್ತಷ್ಟು ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕ ಮಾಡಲಿ ಎಂದು ಹಾರೈಸಿದರು.

ಸದಾ ಸ್ನೇಹ ಜೀವಿಯಾಗಿದ್ದು, ಎಲ್ಲಾ ಶಿಕ್ಷಕರು,ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉತ್ತಮ ಸ್ನೇಹಿತರು ಕೃಷ್ಣಮೂರ್ತಿಯವರಾಗಿದ್ದಾರೆ ಎಂದರು.

ಕಳೆದ ಐದು ವರ್ಷಗಳ ಕಾಲ ಅವರೊಂದಿಗೆ ಶಿಕ್ಷಕನಾಗಿ ಸೇವೆ ಸಲ್ಲಿಸುವ ಯೋಗ ಲಭಿಸಿದ್ದು, ಅವರಿಂದ ಸಾಕಷ್ಟು ಮೌಲ್ಯಗಳನ್ನು ತಾವು ಕಲಿತಿದ್ದಾಗಿ ತಿಳಿಸಿ, ಶಿಕ್ಷಕ ಬದುಕಿನ ಅಂತಿಮ ಶಾಲೆ ಇದಾಗಿದ್ದು, ಅವರಿಗೆ ಶುಭವಾಗಲಿ ಎಂದು ಹಾರೈಸಿದರು. 

ಸನ್ಮಾನ ಸ್ವೀಕರಿಸಿದ ಜೆ.ವಿ.ಕೃಷ್ಣಮೂರ್ತಿ, ತಮ್ಮ 37 ವರ್ಷಗಳ ಶಿಕ್ಷಕ ವೃತ್ತಿಯನ್ನು ಮೆಲುಕು ಹಾಕಿ ಇಂದು ನನ್ನ ಶಿಷ್ಯರು ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ, ಅವರನ್ನು ಕಂಡರೆ ಸಂತಸವಾಗುತ್ತದೆ ಎಂದು ತಿಳಿಸಿ ಶಿಕ್ಷಣ ಸಂಯೋಜಕರಾಗಿಯೂ ತಾವು ಸೇವೆ ಸಲ್ಲಿಸಿದ್ದಾಗಿ ನುಡಿದರು.

ಮಕ್ಕಳಿಗೆ ಅಕ್ಷರದ ಬೆಳಕು ನೀಡುವ ಶಿಕ್ಷಕ ವೃತ್ತಿಯನ್ನು ಗೌರವಿಸುವ ಮೂಲಕ ಶಿಕ್ಷಕರು ಮುನ್ನಡೆದರೆ ನಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪಪ್ರಾಂಶುಪಾಲೆ ಗಾಯಿತ್ರಿದೇವಿ, ಶಿಕ್ಷಕರಾದ ವಿ.ಗೋಪಾಲಕೃಷ್ಣ, ಬಿ.ಎ.ಕವಿತಾ, ಶಿವಕುಮಾರ್,ನಾರಾಯಣರೆಡ್ಡಿ, ಕೆಂಪೇಗೌಡ, ಮುನಿವೆಂಕಟಪ್ಪ, ಪರಿಮಳ, ರಹಮತ್ತುನ್ನೀಸಾ,ಮಂಜುಳಮ್ಮ,ಅಲ್ಲಭಕಾಶ್, ಜಿ.ಶ್ರೀನಿವಾಸ್,ರಾಮೇಗೌಡ, ಮಂಜುನಾಥರೆಡ್ಡಿ, ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್,ಶಿಕ್ಷಕ ಗೆಳೆಯರ ಬಳಗದ ವೀರಣ್ಣಗೌಡ, ವೆಂಕಟೇಶಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News