ತಮ್ಮ ಮಠಗಳಲ್ಲಿರುವ ಹುಳುಕನ್ನು ಮೊದಲು ಸರಿಪಡಿಸಿ: ಪೇಜಾವರ ಶ್ರೀ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ

Update: 2019-08-02 09:20 GMT

ವಿಜಯಪುರ, ಆ.2: ಲಿಂಗಾಯತ ಧರ್ಮ ವಿಚಾರಕ್ಕೆ ಸಂಬಂಧಿಸಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯ ಇತ್ತೀಚೆಗೆ ನೀಡಿರುವ ಹೇಳಿಕೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೇಜಾವರಶ್ರೀ ವಿರುದ್ಧ ಮಾಜಿ ಸಚಿವ ಎಂ.ಬಿ.ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು, ಪೇಜಾವರಶ್ರೀ ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ಅವರು ನಿಲ್ಲಿಸಲಿ ಎಂದು ಖಾರವಾಗಿ ನುಡಿದಿದ್ದಾರೆ.

ಪೇಜಾವರಶ್ರೀ ದಲಿತರೊಂದಿಗೆ ಭೋಜನ ಮಾಡಲಿ, ತಮ್ಮ ಮಠಗಳಿಗೆ ದಲಿತ ಮಠಾಧಿಪತಿಯನ್ನು ನೇಮಿಸಲಿ. ಅದು ಬಿಡಿ, ಲಿಂಗಾಯತರನ್ನಾದರೂ ಮಠಾಧೀಶರನ್ನಾಗಿ ನೇಮಕ ಮಾಡಲಿ ಎಂದು ಎಂ.ಬಿ.ಪಾಟೀಲ್ ಸವಾಲು ಹಾಕಿದರು. ಪೇಜಾವರ ಸ್ವಾಮೀಜಿ ಕರೆದ ಕಡೆ ಹೋಗಲು ಅವರೇನು ಪ್ರಧಾನ ಮಂತ್ರಿಯೇ?, ಹೈಕಮಾಂಡಾ?, ನಮಗೆ ಚರ್ಚೆಗೆ ಪಂಥಾಹ್ವಾನ ಕೊಡಲು ಅವರು ಯಾರು ಎಂದು ಎಂ.ಬಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದರು.

ವೀರಶೈವರು ಹಾಗೂ ಲಿಂಗಾಯಿತರು ಬೇರೆಯಲ್ಲ, ಹಿಂದೂಗಳೇ ಆಗಿದ್ದಾರೆ. ಅನೇಕ ಸಂಪ್ರದಾಯಗಳ ಸಮ್ಮಿಲನವೇ ಒಂದು ಹಿಂದೂ ಧರ್ಮ ಎಂದಿದ್ದ ಪೇಜಾವರ ಶ್ರೀ, ಈ ವಿಚಾರವಾಗಿ ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ.ಜಾಮದಾರ, ಸಾಣೀಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಪ್ರತ್ಯೇಕ ಲಿಂಗಾಯತ ಧರ್ಮ ಸಮರ್ಥಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ಇದೀಗ ಪರ-ವಿರೋಧ ಹೇಳಿಕೆಗಳಿಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News