ನಗರ ಸ್ಥಳೀಯ ಸಂಸ್ಥೆ: ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲು ಕೋಟ ಶ್ರೀನಿವಾಸ ಪೂಜಾರಿ ಮನವಿ

Update: 2019-08-03 12:43 GMT

ಬೆಂಗಳೂರು, ಆ. 3: ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಿ, ಅಧಿಕಾರ ಹಸ್ತಾಂತರಿಸಲು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇಂದಿಲ್ಲಿ ಮನವಿ ಮಾಡಿದ್ದಾರೆ.

ಶನಿವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಪೂಜಾರಿ, ರಾಜ್ಯದ 274 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆದು ವರ್ಷ ಮೀರಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಅಲ್ಲದೆ, ಸಾಮಾನ್ಯ ಸಭೆಯನ್ನೂ ಕರೆಯದೆ ಇರುವುದರಿಂದ 210 ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಆಯ್ಕೆಯಾದ ಸಾವಿರಾರು ಸದಸ್ಯರುಗಳಿಗೆ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಕೈಯಲ್ಲಿ ಇರಬೇಕಾದ ಆಡಳಿತ ಅಧಿಕಾರಿಗಳ ಕೈಯಲ್ಲಿ ಉಳಿದಿದೆ.

ಹಿಂದಿನ ಸರಕಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮೀಸಲಾತಿ ಚುನಾವಣೆಗೆ ಮೊದಲೇ ಪ್ರಕಟಿಸಿ, ನಂತರ ತಿದ್ದುಪಡಿಯ ಗೊಂದಲ ಏರ್ಪಟ್ಟಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ, ಹೈಕೋರ್ಟ್‌ನಲ್ಲಿ 15 ಪ್ರಕರಣಗಳಿದ್ದು, ವಿವಿಧ ನ್ಯಾಯಾಲಯಗಳು ತಡೆಯಾಜ್ಞೆಗಳನ್ನು ನೀಡಿದೆ. ಈ ಬಗ್ಗೆ ಕಾನೂನು ಇಲಾಖೆ ಜತೆ ಚರ್ಚಿಸಿ ತಡೆಯಾಜ್ಞೆ ತೆರವಿಗೆ ಕ್ರಮ ವಹಿಸಬೇಕು. ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ಮನವಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News