ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿ ರದ್ದು: ಸಂಸತ್ತಿನಲ್ಲಿ ಅಮಿತ್ ಶಾ ಘೋಷಣೆ

Update: 2019-08-05 15:16 GMT

► 2 ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮುಕಾಶ್ಮೀರ ವಿಭಜನೆ

► ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮುಕಾಶ್ಮೀರ, ಲಡಾಕ್

► ಲಡಾಕ್‌ಗೆ ವಿಧಾನಸಭೆಯಿರುವುದಿಲ್ಲ

► 370ನೇ ವಿಧಿ ರದ್ದತಿಯ ಅಧಿಸೂಚನೆಗೆ ರಾಷ್ಟ್ರಪತಿ ಅಂಕಿತ

 ಹೊಸದಿಲ್ಲಿ,ಸೆ.5: ಮೋದಿ ಸರಕಾರ ಐತಿಹಾಸಿಕ ನಿರ್ಧಾರವೊಂದರಲ್ಲಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಂವಿಧಾನದ 370ನ್ನು ಕೇಂದ್ರ ಸರಕಾರ ಸೋಮವಾರ ರದ್ದುಪಡಿಸಿದೆ ಹಾಗೂ ಆ ರಾಜ್ಯವನ್ನು ಜಮ್ಮುಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪ್ರಸ್ತಾವವನ್ನು ಮಂಡಿಸಿದೆ.

 ಇದರೊಂದಿಗೆ ಜಮ್ಮುಕಾಶ್ಮೀರದಲ್ಲಿ ಕಳೆದ ವಾರದಿಂದ 30ಸಾವಿರಕ್ಕೂ ಅಧಿಕ ಹೆಚ್ಚುವರಿ ಸೇನಾಪಡೆಗಳ ನಿಯೋಜನೆ ಹಾಗೂ ಅಮರನಾಥ ಯಾತ್ರೆ ರದ್ದತಿಯಿಂದಾಗಿ ಉಂಟಾಗಿದ್ದ ಊಹಾಪೋಹಗಳಿಗೆ ಇಂದು ಕೇಂದ್ರ ಸರಕಾರವು ಅಂತಿಮ ತೆರೆಯೆಳೆದಿದೆ.

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜಸಭೆಯಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಣಯವನ್ನು ಮಂಡಿಸಿದರು.

      ರಾಜ್ಯಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿರ್ಣಯವನ್ನು ಮಂಡಿಸಿದ ಅಮಿತ್‌ಶಾ ‘‘2019ರ ಆಗಸ್ಟ್ 5ರಂದು ಸಂಸತ್‌ನ ಶಿಫಾರಸಿನನ್ವಯ ರಾಷ್ಟ್ರಪತಿಯವರು ಸಂವಿಧಾನದ 370ನೇ ವಿಧಿಯ ಎಲ್ಲಾ ಪರಿಚ್ಛೇದಗಳು ರದ್ದು ಗೊಂಡಿರುವುದಾಗಿ ಘೋಷಿಸಲು ಸಂತಸಪಡುತ್ತಾರೆ’’ ಎಂದು ಹೇಳಿದರು.

   ಜಮ್ಮುಕಾಶ್ಮೀರ ರಾಜ್ಯವನ್ನು ವಿಭಜಿಸಿ ಅದನ್ನು ಜಮ್ಮುಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಚಿಸುವ ಪ್ರಸ್ತಾವದ ವಿಧೇಯಕವನ್ನು ಕೂಡಾ ಶಾ ಸದನದಲ್ಲಿ ಮಂಡಿಸಿದರು.

 ಜಮ್ಮುಕಾಶ್ಮೀರ ಪುನರ್‌ವಿಂಗಡನೆ ವಿಧೇಯಕವನ್ನು ಮಂಡಿಸಿದ ಶಾ ಅವರು, ಲಡಾಕ್ ಪ್ರದೇಶವು ಚಂಡೀಗಢದಂತೆ ವಿಧಾನಸಭೆಯನ್ನು ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದರು. ಜಮ್ಮುಕಾಶ್ಮೀರವು ದಿಲ್ಲಿ ಹಾಗೂ ಪುದುಚೇರಿಯಂತೆ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದರು.

 ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಧಾರವನ್ನು ಶಾ ಅವರು ರಾಜ್ಯಸಭೆಯಲ್ಲಿ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್,ಟಿಎಂಸಿ ಹಾಗೂ ಡಿಎಂಕೆ ಸದನದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಉದ್ರಿಕ್ತ ಪಿಡಿಪಿ ಸಂಸದರೊಬ್ಬರು ತನ್ನ ಉಡುಪನ್ನೇ ಹರಿದು ಪ್ರತಿಭಟನೆ ವ್ಯಕ್ತಪಡಿಸಿದರು. ಇದೇ ವೇಳೆ ಪಿಡಿಪಿ ಸದಸ್ಯರು ಸಂವಿಧಾನದ ಪ್ರತಿಗಳನ್ನು ಹರಿದುಹಾಕಿ ಘೋಷಣೆಗಳನ್ನು ಕೂಗಿದರು. ಆಗ ಉ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆದೇಶದಂತೆ ಅವರನ್ನು ಸದನದಿಂದ ಬಲವಂತವಾಗಿ ಹೊರಕಳುಹಿಸಲಾಯಿತು.

        ರಾಜ್ಯಸಭಾ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಗುಲಾಂ ನಬಿ ಆಝಾದ್ ಅವರು ಮಾತನಾಡಿ, ಇಡೀ ಕಾಶ್ಮೀರ ಕಣಿವೆ ಫೂಯಗೆ ಸಿಲುಕಿದೆ ಹಾಗೂ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದರು.

ಕಾಶ್ಮೀರ ಪರಿಸ್ಥಿತಿಯನ್ನು ಮೊದಲು ಚರ್ಚಿಸಬೇಕಾಗಿದೆ ಎಂದು ಆಝಾದ್ ಹೇಳಿದಾಗ, ಅದಕ್ಕೊಪ್ಪದ ನಾಯ್ಡು ಅವರು ನಿರ್ಣಯವನ್ನು ಮಂಡಿಸುವುದಕ್ಕೆ ಶಾ ಅವರಿಗೆ ಅನುಮತಿ ನೀಡಿದರು.

 ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಣಯವನ್ನು ಹಾಗೂ ರಾಜ್ಯದ ಪುನರ್‌ವಿಂಗಡಣೆ ವಿಧೇಯಕವನ್ನು ಶಾ ಮಂಡಿಸಿದರು. ಜಮ್ಮುಕಾಶ್ಮೀರದಲ್ಲಿ ಸರಕಾರಿ ಉದ್ಯೋಗಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲ ರಾದವರಿಗೆ ಮೀಸಲಾತಿಯನ್ನು ವಿಸ್ತರಿಸುವ ವಿಧೇಯಕವನ್ನು ಕೂಡಾ ಶಾ ಅವರು ಸದನದಲ್ಲಿ ಮಂಡಿಸಿದಸರು.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರಾಷ್ಟ್ರಪತಿಯವರ ವಿಶೇಷ ಆದೇಶದ ಮೂಲಕ ರದ್ದುಪಡಿಸಾಗಿದೆ ಹಾಗೂ ಈ ಆದೇಶವು ಒಂದೇ ಬಾರಿಗೆ ಜಾರಿಯಲ್ಲಿರುತ್ತದೆ ಎಂದು ಶಾ ಅವರು ತಿಳಿಸಿದರು.

 ರಾಜ್ಯಸಭೆಯಲ್ಲಿ ನಿರ್ಣಯವನ್ನು ಮಂಡಿಸುವುದಕ್ಕೆ ಮುನ್ನ ಪ್ರಧಾನಿ, ಸ್ವಗೃಹದಲ್ಲಿ ಸಂಪುಟಸಭೆ ನಡೆಸಿದ್ದರು.

ಕಾಶ್ಮೀರ ಕಣಿವೆಯಲ್ಲಿ ಸರ್ಪಗಾವಲು

ಜಮ್ಮುಕಾಶ್ಮೀರಕ್ಕೆ ವಿಶೇಶ ಸ್ಥಾನಮಾನ ರದ್ದುಪಡಿಸುವ ಘೋಷಣೆಯ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಇಂದು 8 ಸಾವಿರ ಹೆಚ್ಚುವರಿ ಸಿಆರ್‌ಪಿಎಫ್ ಯೋಧರನ್ನು ರಾಜ್ಯಕ್ಕೆ ರವಾನಿಸಲಾಗಿದೆ. ಕಳೆದ ವಾರದಿಂದೀಚೆಗೆ ಕಾಶ್ಮೀರ ಕಣಿವೆಯಲ್ಲಿ 35 ಸಾವಿರಕ್ಕೂ ಅಧಿಕ ಭದ್ರತಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

► 72 ವರ್ಷಗಳ ಇತಿಹಾಸದ 370ನೇ ವಿಧಿಗೆ ಅಂತ್ಯ

ಸಂವಿಧಾನದ 370ನೇ ವಿಧಿಯು ಜಮ್ಮುಕಾಶ್ಮೀರಕ್ಕೆ ತನ್ನದೇ ಆದ ಸಂವಿಧಾನವನ್ನು ಹೊಂದಲು ಹಾಗೂ ರಕ್ಷಣೆ,ದೂರಸಂಪರ್ಕ,ಕರೆನ್ಸಿ ಹಾಗೂ ವಿದೇಶಾಂಗ ವ್ಯವಹಾರ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ಖುದ್ದಾಗಿ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ನೀಡಿತ್ತು. ಇದೀಗ ಸಂವಿಧಾನದ 370ನೇ ವಿಧಿಯ ರದ್ದತಿಯೊಂದಿಗೆ ಜಮ್ಮುಕಾಶ್ಮೀರದ ಈ ವಿಶೇಷ ಸ್ಥಾನಮಾನ ಕೊನೆಗೊಂಡಿದೆ.

1947ರಲ್ಲಿ ಕಾಶ್ಮೀರವು ಭಾರತಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು.

 ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ನೀತಿಗಳನ್ನು ಹಾಗೂ ಸಾಂವಿಧಾನಿಕ ಅಧಿಕಾರಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಬೇಕಿದ್ದರೆ ಅದಕ್ಕೆ ರಾಜ್ಯ ಸರಕಾರದ ಅನುಮೋದನೆ ಪಡೆಯುವುದನ್ನು ಸಂವಿಧಾನದ 370ನೇ ವಿಧಿಯು ಕಡ್ಡಾಯ ಗೊಳಿಸಿತ್ತು.

 ಜಮ್ಮುಕಾಶ್ಮೀರವು ಇನ್ನು ಮುಂದೆ ತನ್ನ ರಾಜ್ಯದ ಸ್ಥಾನಮಾನವನ್ನು ಕಳೆದುಕೊಳ್ಳಲಿದೆ. ಹಾಗೂ ಅದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗಲಿದೆ ಜಮ್ಮುಕಾಶ್ಮೀರವು ವಿಧಾನಸಭೆಯನ್ನು ಹೊಂದಲಿದ್ದರೆ, ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ.

 ವಿಶೇಷ ಸ್ಥಾನಮಾನದ ರದ್ದತಿಯಿಂದಾಗಿ ಜಮ್ಮುಕಾಶ್ಮೀರದಲ್ಲಿ ಇನ್ನು ಮುಂದೆ ಹೊರ ರಾಜ್ಯದ ಜನರು ಕೂಡಾ ಭೂಮಿ, ಆಸ್ತಿಗಳನ್ನು ಖರೀದಿಸಬಹುದು. ಉದ್ಯಮಗಳನ್ನು ಸ್ಥಾಪಿಸಬಹುದಾಗಿದೆ ಹಾಗೂ ಉದ್ಯೋಗಗಳನ್ನು ಪಡೆಯಬಹುದಾಗಿದೆ.

   

ಕಳೆದ ವಾರದಿಂದೀಚೆಗೆ ಜಮ್ಮುಕಾಶ್ಮೀರದಲ್ಲಿ ಕೇಂದ್ರ ಸರಕಾರವು ಭಾರೀ ಸಂಖ್ಯೆಯಲ್ಲಿ ಹೆಚ್ಚುವರಿ ಭದ್ರತಾಪಡೆಗಳನ್ನು ನಿಯೋಜಿಸಿದ್ದುದು ಮತ್ತು ಆಮರನಾಥ ಯಾತ್ರೆಯನ್ನು ರದ್ದುಪಡಿಸಲಾಗಿತ್ತು ಮತ್ತು ರಾಜ್ಯದಿಂದ ಪ್ರವಾಸಿಗರು ಹೊರತೆರಳುವಂತೆ ಸೂಚಿಸಿತ್ತು. ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸುವ ಹಾಗೂ ರಾಜ್ಯವನ್ನು ಪುನರ್‌ವಿಂಗಡಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆಯೆಂದು ಮಾಧ್ಯಮಗಳು ಹಾಗೂ ಕಾಶ್ಮೀರದ ಪ್ರತಿಪಕ್ಷ ನಾಯಕರು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಗೃಹಬಂಧನದಲ್ಲಿ ಒಮರ್, ಮೆಹಬೂಬಾ ಕಾಶ್ಮೀರದಲ್ಲಿ ಇಂಟರ್‌ನೆಟ್, ದೂರಸಂರ್ಕ ಸ್ಥಗಿತ

ಕೇಂದ್ರ ಸರಕಾರವು ಸಂಸತ್‌ನಲ್ಲಿ ರಾಜ್ಯಕ್ಕೆ ವಿಶೇಷ ಸ್ತಾನಮಾನದ ಘೋಷಣೆಯನ್ನು ರದ್ದುಪಡಿಸುವ ಘೋಷಣೆ ಹೊರಡಿಸಿದ ತಾಸುಗಳ ಮೊದಲು, ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾಮುಫ್ತಿ ಸೇರಿದಂತೆ ಹಲವಾರು ಹಿರಿಯ ಕಾಶ್ಮೀರಿ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಇಂಟರ್‌ನೆಟ್ ಹಾಗೂ ದೂರವಾಣಿ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಭದ್ರತಾಪಡೆಗಳಿಗೆ ಸ್ಯಾಟಲೈಟ್‌ಫೋನ್ ಸಂಪರ್ಕವನ್ನು ಒದಗಿಸಲಾಗಿದೆ. ಎಲ್ಲಾ ಶಿಕ್ಷಣ ಸಂಸ್ತೆಗಳು ಹಾಗೂ ಕಚೇರಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ ಮತ್ತು ಜನರು ಗುಂಪಾಗಿ ಜಮಾಯಿಸುವುದನ್ನು ಕೂಡಾ ನಿಷೇದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News