ಮಲೆನಾಡಿಗರನ್ನು ಅತಂತ್ರಗೊಳಿಸಲಿರುವ ‘ಡೀಮ್ಡ್ ಫಾರೆಸ್ಟ್’

Update: 2019-08-06 07:55 GMT

ರಾಜ್ಯ ರಾಜಕಾರಣದ ಅತಂತ್ರ ಅಧಿಕಾರವನ್ನು ಸುಭದ್ರಗೊಳಿಸಲು ‘ಜೆಸಿಬಿ’ ಪಕ್ಷಗಳ ನಮ್ಮ ಶಾಸಕರು ರೆಸಾರ್ಟ್, ಐಶಾರಾಮಿ ಹೋಟೆಲ್‌ಗಳಲ್ಲಿ ಅವಿತುಕೊಂಡಿದ್ದರೆ, ಆ ಸಂದರ್ಭದಲ್ಲಿಯೇ ನಮ್ಮ ಜಿಲ್ಲೆಯ ಅಧಿಕಾರಿಗಳು ರೈತರು ಮತ್ತು ಕಾರ್ಮಿಕರನ್ನು ಒಕ್ಕಲೆಬ್ಬಿಸಲು ತಣ್ಣಗೆ ಸ್ಕೆಚ್ ಸಿದ್ದಗೊಳಿಸಿದ್ದಾರೆ.

ಶಾಸಕರು ಬೆಂಗಳೂರು, ಮುಂಬೈ ಮತ್ತು ಸುಪ್ರೀಂ ಕೋರ್ಟ್ ಎಂದು ಸುದ್ದಿಯಲ್ಲಿ ಇರುವಾಗ ಜನರ ಸಮಸ್ಯೆ ಆಲಿಸುವವರಾರು?
  ಅಧಿವೇಶನದಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಶಾಸಕರಲ್ಲಿ ಒಂದಿಷ್ಟು ಇಚ್ಛಾಶಕ್ತಿ ಇದ್ದಿದ್ದರೆ ನಮ್ಮ ‘ಡೀಮ್ಡ್ ಫಾರೆಸ್ಟ್’ ಸಮಸ್ಯೆಗೆ ತೆರೆ ಎಳೆಯ ಬಹುದಿತ್ತು. ಕಾಂಗ್ರೆಸ್ ಪಕ್ಷದ ಟಿ. ಡಿ.ರಾಜೇಗೌಡರು, ಬಿಜೆಪಿಯ ಹಿರಿಯ ಸದಸ್ಯರಾದ ಕೆ.ಜಿ.ಬೋಪಯ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸಿ.ಟಿ.ರವಿಯವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರ ಸಿಕ್ಕಿದ್ದರೆ ಮಲೆನಾಡಿನ ಜನರ ಪ್ರಶ್ನೆಗೆ ಉತ್ತರ ಸಿಗುತ್ತಿತ್ತು.
ಶಾಸಕರು ಎತ್ತಿದ ಪ್ರಶ್ನೆಗಳು ಎಷ್ಟು ಅಮೂಲ್ಯವಾದವು ಗಮನಿಸಿ.

* ‘ಡೀಮ್ಡ್ ಫಾರೆಸ್ಟ್’ ಎಂದರೇನು?

* ಡೀಮ್ಡ್ ಫಾರೆಸ್ಟ್ ಕಲ್ಪನೆಯೇ ತಪ್ಪುಎಂದು ರಾಜ್ಯ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿರುವುದು ಸರಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ನ್ಯಾಯಾಲಯದ ಅಭಿಪ್ರಾಯದ ಬಗ್ಗೆ ಸರಕಾರದ ನಿಲುವೇನು?. ನ್ಯಾಯಾಲಯದ ಅಭಿಪ್ರಾಯವನ್ನು ಪಾಲಿಸಲು ಸರಕಾರ ತೆಗೆದು ಕೊಂಡಿರುವ ಕ್ರಮಗಳೇನು?.

*ಎಷ್ಟು ಪ್ರದೇಶ ಡೀಮ್ಡ್ ಫಾರೆಸ್ಟ್‌ದಿಂದ ಕೈಬಿಡಲಾಗಿದೆ ?
(ಜಿಲ್ಲಾವಾರು ಮಾಹಿತಿ ನೀಡುವುದು).

*ನ್ಯಾಯಾಲಯದ ಅಭಿಪ್ರಾಯದ ನಂತರ ಡೀಮ್ಡ್ ಅರಣ್ಯದ ಕುರಿತು ಸರಕಾರದ ಕ್ರಮವೇನು?

* ಡೀಮ್ಡ್ ಫಾರೆಸ್ಟ್ ಎಂದು ಘೋಷಿಸುವಾಗ ಸ್ಥಳೀಯ ಪ್ರದೇಶಗಳನ್ನು ಖುದ್ದಾಗಿ ಪರಿಶೀಲಿಸಲಾಗಿದೆಯೇ ?

*ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಕಂದಾಯ ಇಲಾಖೆಗೆ ಸೇರಿದ ಜಾಗವೆಷ್ಟು?
(ತಾಲೂಕುವಾರು ವಿವರ ನೀಡುವುದು).

*ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲು ಇರುವ ಮಾನದಂಡವೇನು?

*ಡೀಮ್ಡ್ ಎಂದು ಗುರುತಿಸಿರುವ ಜಾಗದಲ್ಲಿ ಸಾರ್ವಜನಿಕ ಉದ್ದೇಶಗಳಿ ಗಾಗಿ ಅಗತ್ಯ ಇರುವ ಜಮೀನು ಮಂಜೂರು ಮಾಡಲು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕೈಬಿಡಲು ಅನುಸರಿಸಬೇಕಾದ ಕಾರ್ಯ ವಿಧಾನವೇನು?.
(ಸಂಪೂರ್ಣ ವಿವರ ನೀಡುವುದು).
ಮೂಡಿಗೆರೆ ಶಾಸಕ ಸೆಕ್ಷನ್ 4 ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು.
ಶಾಸಕರು ತಮ್ಮ ಅಧಿಕಾರ ಸುಭದ್ರಗೊಳಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯಿತು. ಶಾಸಕರು ತಮ್ಮ ಸಮಸ್ಯೆಗಳನ್ನು ರೆಸಾರ್ಟ್‌ನಲ್ಲಿ ಬಗೆಹರಿಸಿ ಕೊಂಡರು. ಮಲೆನಾಡಿನ ರೈತರು ಕಾಫಿ ಬೆಳೆಯ ಬೆಲೆ ಕುಸಿದಾಗ ಮತ್ತೊಂದು ಆದಾಯದ ಮೂಲದಿಂದ ಬದುಕು ಕಟ್ಟಿಕೊಳ್ಳಲು ನಿರ್ಮಿಸಿ ಕೊಂಡಿದ್ದ ರೆಸಾರ್ಟ್‌ಗಳು ಸದ್ಯದಲ್ಲಿಯೇ ತಮ್ಮ ಬಾಗಿಲು ಮುಚ್ಚಬೇಕಾಗಿದೆ.

ಕಂದಾಯ ಮತ್ತು ಅರಣ್ಯ ಇಲಾಖೆಗಳ ಇತ್ತೀಚಿನ ಕಾರ್ಯ ಚಟುವಟಿಕೆ ನೋಡಿದರೆ ರೈತರು ಫಾರಂ 50 ಮತ್ತು ಫಾರಂ 53ರಲ್ಲಿ ಪಡೆದ ಮತ್ತು ಕಾರ್ಮಿಕರು 94ಸಿಯಲ್ಲಿ 2014ರ ಹಿಂದೆ ಪಡೆದ ಹಕ್ಕು ಪತ್ರ ಹೊಂದಿರುವ ಭೂಮಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಮಂಜೂರಾದ ಭೂಮಿ ಮತ್ತು ಮನೆಗಳನ್ನು ತೆರವುಗೊಳಿಸಲಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ವರದಿ ಕಳಿಸಲು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರ ಸಭೆಗಳನ್ನು ನಡೆಸಿ ವರದಿ ಸಿದ್ಧಗೊಳಿಸುತ್ತಿದ್ದಾರೆ.

2014ರ ಹಿಂದೆ ಅರ್ಜಿ ಸಲ್ಲಿಸಿದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ದೊರೆಯದಿರಲು ಸರಕಾರ ನಡೆಸಿದವರೇ ಕಾರಣ. ಈಗಲಾದರೂ ಅತಂತ್ರರಾಗಿರುವ ರೈತರ ಆತಂಕ ನಿವಾರಿಸಲು ಮುಂದಾಗಬೇಕು. ಈಗ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ಮುಖ್ಯ ಮಂತ್ರಿಗಳ ಗಮನ ಸೆಳೆದು 2014ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಶೇಖರಪ್ಪನವರ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿಯನ್ನು ಯಥಾವತ್ತಾಗಿ ಸರಕಾರ ಒಪ್ಪಿಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ.

ಜಿಲ್ಲಾಧಿಕಾರಿ ಶೇಖರಪ್ಪನವರ ವರದಿಯಲ್ಲಿ 2014ರ ಹಿಂದೆ ಮಂಜೂರಾದ ಮತ್ತು ಮಂಜೂರಾಗದ ಫಾರಂ 50, ಫಾರಂ 53, 94ಸಿ ಮತ್ತು 94ಸಿಸಿ ಕಂದಾಯ ಭೂಮಿ ಮತ್ತು ದಶಕಗಳಿಂದ ಮಾಡಿರುವ ರೈತರ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಹೊರತು ಪಡಿಸಿದ್ದರು. ಮಲೆನಾಡಿನ ಭವಿಷ್ಯದ ಅಭಿವೃದ್ಧಿಗಾಗಿ ಸಾರ್ವಜನಿಕ ಉದ್ದೇಶಗಳಾದ ಆಶ್ರಯ ನಿವೇಶನ ರಚನೆ, ಸ್ಮಶಾನ, ಸರಕಾರದ ವಿವಿಧ ಇಲಾಖೆಗಳ ಉದ್ದೇಶಗಳಿಗಾಗಿ ಪ್ರತೀ ಗ್ರಾಮದಲ್ಲೂ ಭೂಮಿ ಮೀಸಲಿಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

ಅಧಿಕಾರಿಗಳ ಈಗಿನ ಸಿದ್ಧತೆ ಗಮನಿಸಿದರೆ ಮಲೆನಾಡಿನ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ದಶಕಗಳಿಂದ ಅಭಿವೃದ್ಧಿ ಯಾಗಿರುವ ಚಿಕ್ಕಪುಟ್ಟ ಪಟ್ಟಣಗಳು ಅರಣ್ಯ ಇಲಾಖೆಯ ಆಸ್ತಿಯಾಗಲಿದೆ.

ಜಿಲ್ಲಾಡಳಿತ ಡೀಮ್ಡ್ ಫಾರೆಸ್ಟ್ ಗುರುತಿಸುವ ಕಾರ್ಯದಲ್ಲಿ ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿಲ್ಲ. ಏನು ನಡೆಯುತ್ತಿದೆ ಎಂದು ಸಾರ್ವಜನಿಕರ ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ಬರುತ್ತಿಲ್ಲವೆನಿಸುತ್ತಿದೆ. ಮಲೆನಾಡಿನ ಪ್ರತೀ ಗ್ರಾಮದಲ್ಲೂ ಜನರು ಆತಂಕಿತರಾಗಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗಳಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಅರಣ್ಯ ಕಾಯ್ದೆ ಸೆಕ್ಷನ್4ರ ಸಮಸ್ಯೆ ಬಗೆಹರಿಸಲು ಜನರಿಗೆ ನೀಡಿರುವ ಅವಕಾಶವನ್ನು ಡೀಮ್ಡ್ ಫಾರೆಸ್ಟ್ ವಿಚಾರದಲ್ಲೂ ಪ್ರದರ್ಶಿಸಬೇಕು.

ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕಾಗಿರುವ ಡೀಮ್ಡ್ ಫಾರೆಸ್ಟ್ ಅಂತಿಮ ವಿಸ್ತೀರ್ಣ ಮತ್ತು ನಕ್ಷೆಯನ್ನು ಜನರ ಮತ್ತು ಜನಪ್ರತಿನಿಧಿಗಳ ಅಹವಾಲು ಆಲಿಸಿ ವಾಸ್ತವ ನೆಲೆಯಲ್ಲಿ ಪರಿಶೀಲಿಸಿ ಅಂತಿಮಗೊಳಿಸಬೇಕು.

ಕೊಪ್ಪವಿಭಾಗ ಅರಣ್ಯ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಅರಣ್ಯ ಉಳಿಸುವ ಕಾಳಜಿ ಮಲೆನಾಡಿನ ನಾಗರಿಕರ ಜೀವನ ಭದ್ರತೆಗೆ ಪೂರಕವಾಗಿರಲಿ. ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಹಿಂಸಾತ್ಮಕ ಚಳವಳಿ ಮತ್ತೆ ತಲೆ ಎತ್ತದಂತೆ ಮಾಡುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

ವಿಧಾನ ಸಭೆಯಲ್ಲಿ ಎತ್ತಿದ ತಮ್ಮದೇ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಈಗ ಬಿಜೆಪಿ ಶಾಸಕರ ಮೇಲಿದೆ. ಮಲೆನಾಡಿನ ಸೆಕ್ಷನ್4, ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ ಮತ್ತು ಅಭಯಾರಣ್ಯಗಳ ಸಮಸ್ಯೆ ಬಗೆಹರಿಸಲು ಈಗ ಬಿಜೆಪಿಯ ಶಾಸಕ ಮತ್ತು ಸಂಸದರಿಗೆ ಅಪೂರ್ವ ಅವಕಾಶ ದೊರೆತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಜಿಲ್ಲೆಯ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಮತ್ತು ತರೀಕೆರೆಯಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಕುಮಾರಿ ಶೋಭಾ ಕರಂದ್ಲಾಜೆ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಮತ್ತು ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿರುವ ಮಾಜಿ ಸಚಿವ ಶೃಂಗೇರಿ ಕ್ಷೇತ್ರದ ಜೀವರಾಜ್ ಇಚ್ಛಾಶಕ್ತಿ ಪ್ರದರ್ಶಿಸಿದರೆ ಅರಣ್ಯದ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು. ಕಂದಾಯ ಇಲಾಖೆಯಿಂದ ತೆರವುಗೊಳಿಸಬಹುದಾದ ಭೂಮಿಯ ಅಂತಿಮ ನಕ್ಷೆ ತಯಾರಿಸಲು ನಿರಂತರ ಸಭೆ ನಡೆಯುತ್ತಿದೆ. ಇದು ಕೂಡಲೇ ಸ್ಥಗಿತಗೊಳ್ಳಬೇಕು.

ಮಲೆನಾಡಿನ ರೈತರ ಮತ್ತು ಕಾರ್ಮಿಕರ ಭವಿಷ್ಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈಯಲ್ಲಿದೆ. ಪಕ್ಷ ರಾಜಕಾರಣ ಮಾಡದೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಪರಿಹಾರಕ್ಕೆ ಇಂದಿನಿಂದಲೇ ಪ್ರಯತ್ನ ಪಡದಿದ್ದರೆ ಮಲೆನಾಡಿಗರ ಭವಿಷ್ಯ ಕರಾಳವಾಗಲಿದೆ. ಜಿಲ್ಲಾಡಳಿತ ಪ್ರತೀ ಗ್ರಾಮದಲ್ಲಿ ಸಾರ್ವಜನಿಕರ ಸಭೆ ಕರೆದು ಜನರಿಗೆ ಮಾಹಿತಿ ನೀಡಬೇಕು.

ಜನ ಪ್ರತಿನಿಧಿಗಳು ಇನ್ನಾದರೂ ಜನರ ಮುಂದೆ ಬಂದು ಸಮಸ್ಯೆ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಬೇಕು 

Writer - ಎಂ. ಯೂಸುಫ್ ಪಟೇಲ್

contributor

Editor - ಎಂ. ಯೂಸುಫ್ ಪಟೇಲ್

contributor

Similar News