‘ವಿಧಿ’ಯ ಜೊತೆಗೆ ಚೆಲ್ಲಾಟ!

Update: 2019-08-06 04:29 GMT

ದೊರೆ ಹರಿಸಿಂಗ್ ಭಾರತದೊಂದಿಗೆ ವಿಲೀನವಾಗಲು ಹಿಂದೇಟು ಹಾಕಿದ ಹೊತ್ತಿನಲ್ಲಿ ಆತನ ವಿರುದ್ಧ ಬಂಡೆದ್ದು, ಹಿಂದೂಮಹಾ ಸಭಾ ಮತ್ತು ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತಕ್ಕೆ ತಿರುಗೇಟು ನೀಡಿ ಭಾರತದ ಜೊತೆ ಉಳಿಯಲು ತೀರ್ಮಾನಿಸಿದ ಏಕ ಮಾತ್ರ ಮುಸ್ಲಿಮ್ ಬಾಹುಳ್ಯದ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಭಾರತದೊಂದಿಗಿನ ಈ ವಿಲೀನದ ಸಂದರ್ಭದಲ್ಲಿ ಮಾಡಿಕೊಂಡ ಐತಿಹಾಸಿಕ ಒಪ್ಪಂದದಂತೆ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ಇದೀಗ ಕೇಂದ್ರ ಸರಕಾರ ರದ್ದುಗೊಳಿಸಲು ಮುಂದಾಗಿದೆ. ಕಾಶ್ಮೀರವನ್ನು ಭಾರತ ಸದಾ ತನ್ನ ಮುಕುಟಮಣಿ ಎಂದೇ ಭಾವಿಸಿಕೊಂಡು ಬಂದಿದೆ ಮತ್ತು ಭೌಗೋಳಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಅದರ ಜೊತೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಕಾಶ್ಮೀರವನ್ನು ತನ್ನದೆಂದು ಕರೆದುಕೊಳ್ಳಲು ಈ 370ನೇ ವಿಧಿ ಭಾರತಕ್ಕೆ ಯಾವ ರೀತಿಯಲ್ಲೂ ತೊಡಕನ್ನು ತಂದಿರಲಿಲ್ಲ.

ಈ ವಿಧಿ ಕಾಶ್ಮೀರದ ಜನರ ಪಾಲಿಗೆ ಎಷ್ಟರ ಮಟ್ಟಿಗೆ ಒಳಿತನ್ನು ಮಾಡಿದೆಯೋ ಬಿಟ್ಟಿದೆಯೋ, ಆದರೆ ಭಾರತದೊಳಗೆ ಮೂಲೆಗುಂಪಾಗಿ ಉಳಿಯಬಹುದಾಗಿದ್ದ ಕೆಲವು ರಾಜಕೀಯ ಪಕ್ಷಗಳ ಪಾಲಿಗೆ ಚುನಾವಣೆಯ ವೇಳೆ ಆಹಾರವಾಗುತ್ತ ಅವುಗಳನ್ನು ಬೆಳೆಸುತ್ತಾ ಬಂದಿದೆ. ಹರಿದು ಹಂಚಿ ಹೋಗಬಹುದಾಗಿದ್ದ ಕಾಶ್ಮೀರವನ್ನು ಭಾರತದೊಂದಿಗೆ ಬೆಸೆದ ಹೆಮ್ಮೆ ಈ ವಿಧಿಗಿದ್ದರೆ, ಇನ್ನೊಂದೆಡೆ ಇದೇ ವಿಧಿಯನ್ನು ಬಳಸುತ್ತಾ ಕೆಲವು ರಾಜಕೀಯ ಸಂಘಟನೆಗಳು ಮತ್ತು ಪಕ್ಷಗಳು ಕಾಶ್ಮೀರವನ್ನು ‘ಅನ್ಯ’ವಾಗಿಸುವ ಪ್ರಯತ್ನ ನಡೆಸುತ್ತಾ ಬಂದಿವೆ. ದುರಂತವೆಂದರೆ, ಈ ವಿಧಿಯನ್ನು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತಗೊಳಿಸದೆ, ದೇಶದೊಳಗಿರುವ ಮುಸ್ಲಿಮರ ‘ಓಲೈಕೆ’ಯ, ತುಷ್ಟೀಕರಣದ ಭಾಗವೆಂದು ಪದೇ ಪದೇ ಸಾರುತ್ತಾ, ಅದನ್ನು ನಂಬಿಸುವಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಯಶಸ್ವಿಯಾದುದು. ಕಾಶ್ಮೀರದೊಳಗಿರುವ ಈ 370 ವಿಶೇಷ ಸ್ಥಾನಮಾನದ ಸವಲತ್ತನ್ನು ದೇಶದ ಮುಸ್ಲಿಮರೆಲ್ಲರೂ ಅನುಭವಿಸುತ್ತಾ, ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ತಪ್ಪುಕಲ್ಪನೆಗಳನ್ನು ಹರಡುತ್ತಾ, ಇದೀಗ ಅದೇ 370 ವಿಧಿಯನ್ನು ಮುಂದಿಟ್ಟುಕೊಂಡು, ದೇಶದ ವಿಧಿಯ ಜೊತೆಗೆ ಕೇಂದ್ರದ ನಾಯಕರು ಆಟವಾಡಲು ಹೊರಟಿದ್ದಾರೆ.

370ನೇ ವಿಧಿಯ ಕುರಿತಂತೆ ಇರುವ ಅತಿ ದೊಡ್ಡ ಸುಳ್ಳೆಂದರೆ, ಈ ಮೂಲಕ ವಿಶೇಷ ಸ್ಥಾನಮಾನವನ್ನು ಪಡೆದ ದೇಶದ ಏಕೈಕ ರಾಜ್ಯ ಜಮ್ಮು ಕಾಶ್ಮೀರ ಎನ್ನುವುದು. ಸಂವಿಧಾನದಲ್ಲಿ ವಿಶೇಷ ಅಧಿಕಾರವನ್ನು ಜಮ್ಮು ಕಾಶ್ಮೀರಕ್ಕೆ ಮಾತ್ರ ನೀಡಲಾಗಿಲ್ಲ. ಸಂವಿಧಾನದ 371, 371 (ಎ)ಯಿಂದ 371 (ಎಚ್) ಮತ್ತು 371 (ಜೆ) ವಿಧಿಯಲ್ಲಿ ಈ ದೇಶದ 11 ರಾಜ್ಯಗಳಿಗೆ ವಿಶೇಷ ಸವಲತ್ತು ನೀಡಲಾಗಿದೆ. ಅವೆಂದರೆ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್, ಸಿಕ್ಕಿಂ, ಅರುಣಾಚಲ ಪ್ರದೇಶ, ಕರ್ನಾಟಕ, ನಾಗಾಲ್ಯಾಂಡ್, ಮಿರೆರಾಂ, ಮಣಿಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣ. ಹಿಮಾಚಲ ಪ್ರದೇಶ ಹಾಗೂ ಈಶಾನ್ಯದ ಹಲವು ರಾಜ್ಯಗಳಲ್ಲಿ, ಅಲ್ಲಿನ ನಿವಾಸಿಗಳನ್ನು ಹೊರತುಪಡಿಸಿ ಇತರರು ಜಮೀನು ಅಥವಾ ಆಸ್ತಿಯನ್ನು ಖರೀದಿಸುವಂತಿಲ್ಲ. ಇಷ್ಟಾದರೂ ಬಿಜೆಪಿ ಮತ್ತು ಕೆಲವು ಸಂಘಟನೆಗಳ ಪಾಲಿಗೆ ಕಾಶ್ಮೀರದ ವಿಶೇಷ ಸ್ಥಾನಮಾನ ‘ವಿವಾದ’ದ ವಿಷಯವಾಗುವುದಕ್ಕೆ ಮುಖ್ಯ ಕಾರಣ, ಕಾಶ್ಮೀರ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶ ಎನ್ನುವುದಷ್ಟೇ ಆಗಿದೆ. ಜಮ್ಮುಕಾಶ್ಮೀರದ ವಿಧಿ ಭಾರತದೊಂದಿಗೆ ನಿರ್ಣಯವಾಗುವ ಸಂದರ್ಭದಲ್ಲಿ 370ನೇ ವಿಧಿಯ ಭಾಗೀದಾರಿಕೆ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಜಮ್ಮುಕಾಶ್ಮೀರವು ಭಾರತದ ಜೊತೆಗೆ ಸೇರ್ಪಡೆಯಾಗಲು ಶೇಖ್ ಅಬ್ದುಲ್ಲಾ ಅವರ ಅವಿರತ ಶ್ರಮವನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕಾಗಿದೆ.

1947ರಲ್ಲಿ ಭಾರತದ ಜೊತೆ ವಿಲೀನಗೊಳ್ಳಲು ಸಮ್ಮತಿಸಿದಾಗ ಆ ರಾಜ್ಯವು ತನ್ನದೇ ಆದ ಸಂವಿಧಾನ ಹೊಂದುವ ಷರತ್ತು ವಿಧಿಸಲಾಗಿತ್ತು. ಈ ಬಗ್ಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಶೇಖ್ ಮುಹಮ್ಮದ್ ಅಬ್ದುಲ್ಲಾ ಮಧ್ಯೆ ಹಲವು ತಿಂಗಳ ಕಾಲ ಚರ್ಚೆ ನಡೆದ ಬಳಿಕ ಭಾರತದ ಸಂವಿಧಾನದಲ್ಲಿ ಕಾಶ್ಮೀರವನ್ನು ಸೇರಿಸಲಾಯಿತು. ಈ ಒಪ್ಪಂದದ ಭಾಗವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. 370ನೇ ವಿಧಿಯನ್ನು ರದ್ದು ಮಾಡುವುದರಿಂದ ಕಾಶ್ಮೀರವು ಭಾರತದ ಜೊತೆಗೆ ಇನ್ನಷ್ಟು ಗಟ್ಟಿಯಾಗಿ ಬೆಸೆದುಕೊಳ್ಳುತ್ತದೆ ಎಂದಾದರೆ ಈ ದೇಶಕ್ಕೆ ಅದಕ್ಕಿಂತ ಸಂಭ್ರಮದ ವಿಷಯ ಇನ್ನೊಂದಿಲ್ಲ. ಕೇಂದ್ರ ಸರಕಾರದ ಈ ನಿರ್ಣಯವನ್ನು ದೇಶ ಒಕ್ಕೊರಲಲ್ಲಿ ಸ್ವಾಗತಿಸುತ್ತಲೂ ಇತ್ತು. ಆದರೆ ಕೇಂದ್ರದ ನಿರ್ಣಯವನ್ನು ದೇಶ ಒಕ್ಕೊರಲಲ್ಲಿ ಸ್ವಾಗತಿಸುತ್ತಿಲ್ಲ ಎನ್ನುವ ಅಂಶವನ್ನು ನಾವಿಂದು ಗಮನಿಸಬೇಕಾಗಿದೆ. ಕೇಂದ್ರದ ಆತುರದ ನಿರ್ಣಯವನ್ನು ಪ್ರಶ್ನಿಸುತ್ತಿರುವ ಇವರೆಲ್ಲರೂ, ಕಾಶ್ಮೀರ ಭಾರತದ ಜೊತೆಗೆ ಅವಿನಾಭಾವವಾಗಿ ಬೆಸೆದಿರಬೇಕು ಎಂದ ಬಯಸುವವರೇ ಆಗಿದ್ದಾರೆ. ಸರಕಾರದ ಈ ಕ್ರಮ, ಎಲ್ಲಿ ಕಾಶ್ಮೀರವನ್ನು ಭಾರತದಿಂದ ಇನ್ನಷ್ಟು ದೂರಗೊಳಿಸುತ್ತದೆಯೋ ಎನ್ನುವ ಆತಂಕವೇ, ಸರಕಾರದ ಕ್ರಮವನ್ನು ಅವರು ಪ್ರಶ್ನಿಸುವಂತೆ ಮಾಡಿದೆ. ಸರಕಾರದ ಈ ನಿರ್ಧಾರ ಎರಡು ಮುಖ್ಯ ಪ್ರಶ್ನೆಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ. ಒಂದು, ಈ ನಿರ್ಧಾರ ಸಂವಿಧಾನ ಬದ್ಧವೇ? ಎನ್ನುವ ಪ್ರಶ್ನೆ.

ಎರಡನೇ ಪ್ರಶ್ನೆ, ಕಾಶ್ಮೀರದ ವಿಶ್ವಾಸವನ್ನು ತೆಗೆದುಕೊಳ್ಳದೆ ಕೇವಲ ಭಾರತದೊಳಗಿರುವ ಇತರ ಪಕ್ಷಗಳ ಒಮ್ಮತದ ವಿಶ್ವಾಸಗಳ ಮೂಲಕ ಏಕಪಕ್ಷೀಯವಾಗಿ ಕಾಶ್ಮೀರವನ್ನು ಶಾಶ್ವತವಾಗಿ ನಮ್ಮದಾಗಿಸಿಕೊಳ್ಳಲು ಸಾಧ್ಯವೇ? ಎನ್ನುವುದು. 370ನೇ ವಿಧಿ ರದ್ದತಿ ಇಂದು ಮುಖ್ಯವಾಗಿ ಚರ್ಚೆಯಲ್ಲಿರುವುದು ಕಾಶ್ಮೀರದ ಹಿತಾಸಕ್ತಿಗಿಂತ, ಸಂವಿಧಾನದ ಹಿತಾಸಕ್ತಿಯ ಕಾರಣಕ್ಕಾಗಿ. ಈ ವಿಧಿಯು ಕಾಶ್ಮೀರದ ಪಾಲಿಗೆ ಶಾಶ್ವತವೋ ಅಥವಾ ತಾತ್ಕಾಲಿಕವೋ ಎನ್ನುವುದರ ಕುರಿತಂತೆ ಸ್ಪಷ್ಟತೆಯಿಲ್ಲ. ಜೊತೆಗೆ ವಿಧಿಯನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಬೇಕಿದ್ದರೆ ಜಮ್ಮು ಕಾಶ್ಮೀರದ ವಿಶೇಷ ‘ಸಂವಿಧಾನ ಸಭೆ’ಯ ಅನುಮತಿ ಅಗತ್ಯ. ಜಮ್ಮು ಕಾಶ್ಮೀರದ ಈ ಸಂವಿಧಾನ ಸಭೆಯನ್ನು 1956ರಲ್ಲಿ ವಿಸರ್ಜಿಸಲಾಗಿದೆ. ಸದ್ಯಕ್ಕೆ, ಅಸ್ತಿತ್ವದಲ್ಲಿರುವ ಅಧಿಕೃತ ವಿಧಾನಸಭೆಯನ್ನೂ ವಿಸರ್ಜಿಸಲಾಗಿದ್ದು, ಈಗ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯಿದೆ. ಸಂವಿಧಾನದ ಪ್ರಕಾರ ಒಂದು ರಾಜ್ಯವು ರಾಷ್ಟ್ರಪತಿಗಳ ಆಡಳಿತದಡಿ ಇದ್ದರೆ, ಆ ರಾಜ್ಯದ ವಿಧಾನಸಭೆಯ ಅಧಿಕಾರವನ್ನು ಸಂಸತ್ತು ಹೊಂದಿರುತ್ತದೆ. ಇದನ್ನೇ ಮುಂದಿಟ್ಟು ಈಗ ಜಮ್ಮು ಕಾಶ್ಮೀರ ವಿಧಾನಸಭೆಯ ಪರವಾಗಿ, ಕೇಂದ್ರದಲ್ಲಿರುವ ಸಂಸತ್ತು ನಿರ್ಣಯ ಮತ್ತು ಮಸೂದೆಯನ್ನು ಮಂಡಿಸಿದೆ. ಆದರೆ ಇಲ್ಲಿರುವ ಸಮಸ್ಯೆಯೆಂದರೆ, ಕಾಶ್ಮೀರದ ಬಹುತೇಕ ಜನತೆ ಹಾಗೂ ಈ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು 370ನೇ ವಿಧಿ ರದ್ದತಿಗೆ ಸಂಪೂರ್ಣ ವಿರುದ್ಧವಾಗಿದ್ದಾರೆ.

ಹೀಗಿರುವಾಗ ಸಂಸತ್ತಿನ ನಿರ್ಣಯ, ಅಧಿಕೃತವಾಗಿ ಕಾಶ್ಮೀರದ ಜನರ ಅಥವಾ ಜನಪ್ರತಿನಿಧಿಗಳ ನಿರ್ಣಯವಾಗುವುದು ಸಾಧ್ಯವಿಲ್ಲ. 370ನೇ ವಿಧಿಯು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂಬ ಬಲವಾದ ವಾದಗಳ ಹೊರತಾಗಿಯೂ , ಈ ವಿಧಿ ಸಂವಿಧಾನದ ಶಾಶ್ವತ ನಿಬಂಧನೆಯಾಗಿದೆ ಎಂಬ ವಾದವನ್ನು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಗಳು ಪದೇ ಪದೇ ಎತ್ತಿಹಿಡಿದಿವೆ ಎನ್ನುವ ಅಂಶಗಳನ್ನು ನಾವು ಗಮನಿಸಬೇಕಾಗಿದೆ. 370ನೇ ವಿಧಿಗೆ ‘ತಾತ್ಕಾಲಿಕ’ ಎಂದು ಶೀರ್ಷಿಕೆ ಇದ್ದರೂ ಇದು ಖಂಡಿತವಾಗಿಯೂ ಶಾಶ್ವತ ರೂಪದ್ದಾಗಿದೆ ಎಂದು 2018ರಲ್ಲಿ ನೀಡಿರುವ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಎಲ್ಲ ಅವಕಾಶಗಳೂ ರಾಜಕೀಯ ನಾಯಕರಿಗೆ ಇನ್ನೂ ಇದೆ. ಸರಕಾರದ ನಿರ್ಧಾರವನ್ನು ಶಿರೋಮಣಿ ಅಕಾಲಿದಳ, ಬಿಎಸ್ಪಿ, ಆಪ್, ಬಿಜೆಡಿ, ಬಿಡಿಎಫ್‌ನಂತಹ ಪಕ್ಷಗಳು ಬಹಿರಂಗವಾಗಿ ಬೆಂಬಲಿಸಿವೆ. ಕೆಲವು ಪ್ರಮುಖ ಪಕ್ಷಗಳ ನಾಯಕರ ವೌನವೂ ‘ಪರೋಕ್ಷ ಬೆಂಬಲ’ವೇ ಆಗಿದೆ. ಇವುಗಳನ್ನು ಗಮನಿಸಿದರೆ, ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಈ ಎಲ್ಲ ಪಕ್ಷಗಳನ್ನು ಸರಕಾರ ಪೂರ್ವಭಾವಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡಂತಿದೆ. ಆದರೆ ಅದೇ ವೇಳೆ ಕಾಶ್ಮೀರದ ಜನತೆಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಈ ದೊಡ್ಡ ನಿರ್ಧಾರ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು. ಸಂಸತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಹುಮತವಿದೆ ಎಂದ ಮಾತ್ರಕ್ಕೆ ಅದು, ಆಳುವ ಪಕ್ಷ ಸರ್ವಾಧಿಕಾರಿಯಾಗುವುದಕ್ಕೆ ಪರವಾನಿಗೆಯಾಗಿ ಬಿಡುವುದಿಲ್ಲ. ಅಂತಿಮವಾಗಿ ಇದು ಕಾಶ್ಮೀರದ ಜನತೆಗೆ ಸಂಬಂಧಿಸಿದ ತೀರ್ಮಾನ. ಈ ತೀರ್ಮಾನವನ್ನು ಕಾಶ್ಮೀರದ ಜನತೆ ಸ್ವೀಕರಿಸಿ ಬಿಟ್ಟರೆ ಅದಕ್ಕಿಂತ ಸಂತೋಷದ ವಿಷಯ ಬೇರಿಲ್ಲ. ಆದರೆ ಕಾಶ್ಮೀರದ ಬಾಯಿಯನ್ನು ಅನಧಿಕೃತ ‘ಕರ್ಫ್ಯೂ’ಮೂಲಕ ಹೊಲಿಯಲಾಗಿದೆ ಮತ್ತು ಈ ವೌನವನ್ನೇ ಕಾಶ್ಮೀರದ ಸಮ್ಮತಿಯೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.

ಸದ್ಯದ ನಿರ್ಧಾರದ ಕುರಿತಂತೆ ಇರುವ ಅತಿದೊಡ್ಡ ಆತಂಕ, ಅದು ಕಾಶ್ಮೀರದಲ್ಲಿ ಉಗ್ರವಾದಿಗಳಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಪೂರಕವಾಗಿ ಬಿಡುತ್ತದೆಯೋ ಎಂಬುದಾಗಿದೆ. ಭಾರತ ಸರಕಾರ ತಮ್ಮನ್ನು ವಂಚಿಸಿದೆ ಎನ್ನುವ ಭಾವನೆ ‘ಕಾಶ್ಮೀರಿ’ಗಳಲ್ಲಿ ಮನೆಮಾಡಿದರೆ, ಅದನ್ನೇ ಉಗ್ರವಾದಿಗಳು ಬಳಸಿಕೊಂಡು ಅವರನ್ನು ತಮ್ಮವರನ್ನಾಗಿಸುವ ಪ್ರಯತ್ನ ನಡೆಸಬಹುದು. ಜನರು ಬೀದಿಗೆ ಬಂದರೆ ಅವರ ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕೆ ನಮ್ಮ ಬಳಿ ಭಾರೀ ಸೇನಾ ಪಡೆ ಇದೆ ಎಂದು ನಾವು ಸಮಾಧಾನವನ್ನೇನೋ ಪಡೆಯಬಹುದು. ಆದರೆ ಒಂದು ಪ್ರಾಂತದ ಜನತೆಯನ್ನು ಬಲದ ಮೂಲಕ ನಿಯಂತ್ರಣದಲ್ಲಿಡುತ್ತೇವೆ ಎಂಬ ಅತಿ ಆತ್ಮ ವಿಶ್ವಾಸ ಕಾಶ್ಮೀರವನ್ನು ಭೌಗೋಳಿಕವಾಗಿಯಷ್ಟೇ ನಮ್ಮದಾಗಿ ಉಳಿಸಬಹುದೇ ಹೊರತು ಮಾನಸಿಕವಾಗಿ ಅಲ್ಲ. ಕೇಂದ್ರದ ಈ ನಿರ್ಧಾರದಿಂದ ಕಾಶ್ಮೀರ ಇನ್ನಷ್ಟು ಹದಗೆಟ್ಟರೂ ಅದರಲ್ಲಿ ಅಚ್ಚರಿಯಿಲ್ಲ. ಈ ದೇಶದ ಕೆಲವು ರಾಜಕೀಯ ಸಂಘಟನೆಗಳಿಗೆ ಕಾಶ್ಮೀರ ಸದಾ ಹೊತ್ತಿ ಉರಿಯುವುದು ಬೇಕಾಗಿದೆ. ಬಹುಶಃ ಕೇಂದ್ರ ಸರಕಾರ ಈ ನಿರ್ಧಾರದ ಮೂಲಕ ಕಾಶ್ಮೀರವನ್ನು ಭಾರತದಿಂದ ಇನ್ನಷ್ಟು ದೂರಗೊಳಿಸುವ ದುರುದ್ದೇಶ ಹೊಂದಿದೆಯೇ ಎಂಬ ಅನುಮಾನ ಹಲವು ರಾಜಕೀಯ ತಜ್ಞರನ್ನು ಕಾಡುತ್ತಿರುವುದು ಇದೇ ಕಾರಣಕ್ಕೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News