ಕಳಸ: ಭಾರೀ ಮಳೆಗೆ ಮುಳುಗಿದ ಹೆಬ್ಬಾಳೆ ಸೇತುವೆ

Update: 2019-08-06 18:55 GMT

ಕಳಸ, ಆ.5: ತಾಲೂಕಿನಾದ್ಯಂತ ಕಳೆದ ಆರು ದಿನಗಳಿಂದ ಸತತವಾಗಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ, ರಸ್ತೆ ಕುಸಿತ, ಗುಡ್ಡ, ಸೇತುವೆ ಮುಳುಗಡೆ ಕುಸಿತಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ.

ಕಳೆದ ಕೆಲದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಸೋಮವಾರ ಸಂಜೆಯಿಂದ ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿದೆ. ಸೋಮವಾರ ಮಧ್ಯರಾತ್ರಿ ಪಟ್ಟಣ ಸಮೀಪದಲ್ಲಿ ಕಳಸ-ಹೊರನಾಡು ಸಂಪರ್ಕಕ್ಕಾಗಿ ಭದ್ರಾ ನದಿಗೆ ಅಡ್ಡಲಾಗಿ ಅಡ್ಡಲಾಗಿ ನಿರ್ಮಿಸಲಾಗಿರುವ ಹೆಬ್ಬಾಳೆ ಸೇತುವೆ ಮೇಲೆಯೇ ನೀರು ಹರಿಯಲಾರಂಭಿಸಿ ಮರವೊಂದು ಸೇತುವೆ ಮೇಲೆ ಸಿಲುಕಿಕೊಂಡಿತ್ತು. ಸ್ಥಳೀಯರು ಮುಂಜಾನೆ ಮರವನ್ನು ತೆರವುಗೊಳಿಸಿದ್ದರು.

ಮಂಗಳವಾರ ಮುಂಜಾನೆಯಿಂದಲೇ ಕಳಸ, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದ ಪರಿಣಾಮ ಹೆಬ್ಬಾಳೆ ಸೇತುವೆ ಮಂಗಳವಾರ ಬೆಳಗ್ಗೆ 10ಕ್ಕೆ ಸೇತುವೆ ಮುಳುಗಡೆಯಾಗಿತ್ತು. ಇದರಿಂದಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ದೂರದ ಊರುಗಳಿಂದ ಆಗಮಿಸಿದ್ದ ನೂರಾರು ವಾಹನಗಳು ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ಕೂಡ ಕೆಲ ಬಸ್ಸುಗಳು, ಕಾರುಗಳು ವಾಹನಗಳು ನದಿ ದಾಟಿಸುವ ಸಹಾಸ ಮಾಡಿದರು. ಸ್ಥಳಿಯರು ನೀರಿನೊಂದಿಗೆ ಸೇತುವೆ ಮೇಲೆ ಬಂದು ಬಿದ್ದಿದ್ದ ಬೃಹತ್ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೆಲ ವಾಹನಗಳು ನೀರು ಸಂಪೂರ್ಣವಾಗಿ ಇಳಿಮುಖವಾಗುವ ವರೆಗೆ ಕಾದು ನಂತರ ತಮ್ಮ ಪ್ರಯಾಣ ಬೆಳೆಸಿದರು. ಇನ್ನು ಕೆಲ ವಾಹನಗಳು ಹಳುವಳ್ಳಿ ಗ್ರಾಮದ ಮತ್ತೊಂದು ರಸ್ತೆಯ ಮೂಲಕ ಹೊರನಾಡಿಗೆ ತೆರಳಿದರು. ಸಂಜೆ ವೇಳೆಯೂ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ನದಿ ನೀರು ರಭಸವಾಗಿ ಹರಿಯುವ ಸಂಭವವಿದ್ದು, ಕಳಸ ಪೊಲೀಸರು ಸೇತುವೆ ಮೇಲೆ ಕಣ್ಗಾವಲಿರಿಸಿದ್ದಾರೆ. ನೀರು ಹೆಚ್ಚಾದಲ್ಲಿ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಿದ್ದಾರೆಂದು ತಿಳಿದು ಬಂದಿದೆ.

ಇನ್ನು ಕಳಸ-ಕುದುರೆಮುಖ ರಸ್ತೆಯ ಶ್ರೀರಾಮ ಎಸ್ಟೇಟ್ ಸಮೀಪ ಬೃಹತ್ ಗಾತ್ರದ ಮರವೊಂದು ಮುಖ್ಯರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಚಿಕ್ಕಮಗಳೂರು- ಮಂಗಳೂರು ಭಾಗಕ್ಕೆ ಪ್ರಯಾಣ ಬೆಳೆಸುವ ವಾಹಮಗಳಿಗೆ ಸಂಚಾರಕ್ಕೆ ತೊಂದರೆಯಾಗಿತ್ತು. ಇದೇ ಭಾಗದಲ್ಲಿ ಮುಖ್ಯ ರಸ್ತೆಯ ಅಂಚಿನಲ್ಲಿರುವ ಗುಡ್ಡ ಕುಸಿಯತೊಡಗಿದ್ದು, ಮಳೆ ಮುಂದುವರಿದರೆ ಹೆಚ್ಚಿನ ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ. 
ಹೊರನಾಡು ರಸ್ತೆಯ ಗೂರ್ಲಿಕೆ ಎಂಬಲ್ಲಿ ಮುಖ್ಯ ರಸ್ತೆಯ ತಡೆಗೋಡೆ ಕುಸಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಿಸುವಂತಾಗಿದೆ. ಇನ್ನು ಕಳಸ ಪಶು ಆಸ್ಪತ್ರೆಯ ಕಂಪೌಂಡ್ ಕುಸಿದಿದ್ದು, ಕಳಸ ಪಟ್ಟಣ ಸಮೀಪದ ಕೋಟೆಹೊಳೆ ಬಡಾವಣೆಯ ಮಧು ಎಂಬವರ ಮನೆಯ ಮೇಲ್ಛಾವಣಿ ಭಾರೀ ಗಾಳಿಗೆ ಸಿಲುಕಿ ಹಾರಿ ಹೋಗಿದೆ.

ತಾಲೂಕಿನ ಭದ್ರಾ ನದಿ ಮತ್ತು ಸೋಮವತಿ ನದಿಗಳು ತುಂಬಿ ಹರಿದು ನದಿ ಪಾತ್ರದ ಹೆಚ್ಚಿನ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಮಳೆ ತೀವ್ರವಾಗುವ ಸಾಧ್ಯತೆ ಕಂಡು ಬರುತ್ತಿದೆ. ಒಟ್ಟಾರೆ ಕಳಸ ತಾಲೂಕಿನಾದ್ಯಂತ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಗಳಿಂದ ಹೊರಬಾರದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News