ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ, 20 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

Update: 2019-08-06 19:01 GMT

ಮಂಡ್ಯ, ಆ.6: ನಾಗಮಂಗಲ ಪಟ್ಟಣದ ಮೊಬೈಲ್ ಶೋ ರೂಂ ನಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ನಾಗಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ನಗರದ ಬನ್ನಿಮಂಟಪ ನಿವಾಸಿಗಳಾದ ಕಬ್ಬಾಳು ಅಲಿಯಾಸ್ ಚಂದು(25), ಅರ್ಜುನ ಕುಮಾರ್ ಅಲಿಯಾಸ್ ಬಜ್ಜಕ(26) ಹಾಗು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕೃಷ್ಣಾಪುರ ಗ್ರಾಮದ ಚನ್ನಪ್ಪ(20) ಬಂಧಿತರು.

ಕಳೆದ ಜು.20ರಂದು ನಾಗಮಂಗಲ ಪಟ್ಟಣದ ಸಂಗೀತ ಮೊಬೈಲ್ ಶೋರೂಂನ ರೋಲಿಂಗ್ ಷಟರ್ ಅನ್ನು ಎಲೆಕ್ಟ್ರಿಕ್ ಕಟರ್ ನಿಂದ ಕತ್ತರಿಸಿ 26,23,287 ರೂ. ಮೌಲ್ಯದ ವಿವಿಧ ಕಂಪನಿಯ 177 ಮೊಬೈಲ್ ಸೆಟ್‍ಗಳನ್ನು ಕಳವು ಮಾಡಿದ್ದರು.

ನಾಗಮಂಗಲ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಿಪಿಐ ಎಂ.ನಂಜಪ್ಪ ಮತ್ತು ಎಸ್‍ಐ ರವಿಕಿರಣ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ್ ದೇವರಾಜ್, ಶೋರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನಾಧರಿಸಿ ಪೊಲೀಸರ ತಂಡ ಆರೋಪಿಗಳನ್ನು ಪತ್ತೆಹಚ್ಚಿದರು ಎಂದರು. 

ಆ.4ರಂದು ಕಬ್ಬಾಳು ಅಲಿಯಾಸ್ ಚಂದುನನ್ನು ಬೆಂಗಳೂರಿನ ಯಲಹಂಕದಲ್ಲಿ, 5ರಂದು ಅರ್ಜುನ ಹಾಗೂ ಚನ್ನಪ್ಪನನ್ನು ಆ.5ರಂದು ಅತ್ತಿಬೆಲೆಯಲ್ಲಿ ಬಂಧಿಸಲಾಯಿತು. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಬಂಧಿತರಿಂದ 20 ಲಕ್ಷ ರೂ. ಮೌಲ್ಯದ 144 ಮೊಬೈಲ್ ಸೆಟ್, ಒಂದು ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿದ್ದ ಕಟ್ಟರ್, ಕ್ಯಾಟರ್ ಪಿಲ್ಲರ್ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಆರೋಪಿಗಳ ವಿರುದ್ಧ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ಠಾಣೆಯಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಅವರು ಹೇಳಿದರು. 

ಇದೇ ವೇಳೆ ಪ್ರಕರಣ ಬೇಧಿಸಿದ ಡಿವೈಎಸ್ಪಿ ವಿಶ್ವನಾಥ್, ಸಿಪಿಐ ಎಂ.ನಂಜಪ್ಪ, ಎಸ್‍ಐ ರವಿಕಿರಣ್, ಎಎಸ್‍ಐ ಎ.ಎಚ್.ಪೀಟರ್, ಸಿಬ್ಬಂದಿಗಳಾದ ಉಮೇಶ್, ಸಿದ್ದಪ್ಪ, ನಾರಾಯಣ, ಹರೀಶ್, ರೇವಣ್ಣ, ರವೀಶ್, ಹನೀಶ್, ಇಂದ್ರಕುಮಾರ್,  ಕಿರಣ್‍ಕುಮಾರ್, ಮಂಜನಾಥ ಅವರನ್ನು ಎಸ್ಪಿ ಅಭಿನಂದಿಸಿದರು. ಡಿವೈಎಸ್ಪಿ ವಿಶ್ವನಾಥ್, ಪ್ರೊಬೆಷನರಿ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ಹಾಗು ಸಿಪಿಐ ನಂಜಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News