ಮಲೆನಾಡು ಪ್ರದೇಶದಲ್ಲಿ ಮುಂದುವರಿದ ಮಳೆ ಆರ್ಭಟ

Update: 2019-08-07 05:16 GMT

ಚಿಕ್ಕಮಗಳೂರು, ಆ.7: ಮಲೆನಾಡು ಭಾಗದಲ್ಲಿ ಬುಧವಾರವೂ ಮಳೆ ಆರ್ಭಟ ಮುಂದುವರಿದಿದೆ. ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದರೆ, ಸಿಲುಕಿ ಗ್ರಾಮೀಣ ಪ್ರದೇಶದಲ್ಲಿ ಬಿರುಗಾಳಿಗೆ ಹಲವಾರು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.

ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆ ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಈ ಬಾರಿ ನಾಲ್ಕನೇ ಸಲ ಮುಳುಗಡೆಯಾಗಿದೆ. ಇದರಿಂದ ಕಳಸ -ಹೊರನಾಡು ಸಂಪರ್ಕ ಕಡಿತಗೊಂಡಿದ್ದು, ಹೊರನಾಡಿಗೆ ತೆರಳುವ ವಾಹನ ಸವಾರರ ಪರದಾಡುವಂತಾಗಿದೆ.

ಭದ್ರಾ ನದಿ ಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಅಪಾಯಮಟ್ಟದಲ್ಲಿ ನದಿ ಹರಿಯುತ್ತಿದೆ. ತರೀಕೆರೆ ತಾಲೂಕಿನ ಬರಗೇನಹಳ್ಳಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಲವು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‌ಗಳು ಉರುಳಿಬಿದ್ದಿವೆ. ಗಾಳಿಮಳೆಯಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಶೃಂಗೇರಿ ಕ್ಷೇತ್ರದಾದ್ಯಂತ ಕಳೆದೆರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನತೆ ತತ್ತರಿಸುತ್ತಿದ್ದಾರೆ. ಎನ್.ಆರ್. ಪುರದ ಕೆಲ ಪ್ರದೇಶಗಳಲ್ಲಿ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿವೆ.

ಜಯಪುರದಲ್ಲಿ ಸೇತುವೆ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಬಾಳೆಹೊನ್ನೂರು ಸೇತುವೆ ಸಮೀಪ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಶೃಂಗೇರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಶಾಸಕ ರಾಜೇಗೌಡರು ಕೂಡಾ ಶೃಂಗೇರಿ ನದಿ ಬದಿಯ ದೇವಸ್ಥಾನದ ಸಮೀಪದ ಭಾರತಿ ಬೀದಿ ಸೇರಿದಂತೆ ಹಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿ ಬೇಕಾದ ಸೌಲಭ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುತ್ತಿನಕೊಪ್ಪಭಾಗದಲ್ಲಿ ಮಳೆಯಿಂದ ಮರಗಳು ಮನೆಯ ಮೇಲೆ ಉರುಳಿ ಹಾನಿ ಉಂಟಾಗಿದೆ. ಮುಡುವ ಶಂಕರಪುರ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಿದೆ. ಕುದುರೆಗುಂಡಿ ಕಾನೂರು ಕಟ್ಟಿನಮನೆ ಸಂಪರ್ಕ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ. ಮೆಣಸೂರು ಪಂಚಾಯತ್‌ವ್ಯಾಪ್ತಿಯ ಬಡಗಬೈಲ್ ಎಂಬಲ್ಲಿ ಮರ ಮನೆಯ ಮೇಲೆ ಬಿದ್ದು ಅಪಾರ ಹಾನಿ ಉಂಟಾಗಿದೆ. ಹರಿಹರಪುರ ಭಾಗದಲ್ಲೂ ಕೂಡ ಮಳೆಯಿಂದ ಜನತೆ ಕಂಗೆಟ್ಟಿದ್ದಾರೆ.

ನಿನ್ನೆ ಸುರಿದ ಭಾರೀ ಮಳೆಯಿಂದ ಹಂತೂರು ಗ್ರಾಮದ ಹೇಮಾವತಿ ನದಿಪಾತ್ರದ ಬಳಿ ವಾಸವಿದ್ದ ಕುಟುಂಬವೊಂದು ನೆರೆಯಲ್ಲಿ ಸಿಲುಕಿ ಸಂಕಷ್ಟಕ್ಕೀಡಾಗಿತ್ತು. ಇಂದು ಬೆಳಗ್ಗೆ ಗೋಣಿಬೀಡು ಪೋಲಿಸರ ಮೂಲಕ ವಿಷಯ ತಿಳಿದ ಬಿಳಗುಳದ ಅಲ್ತಾಫ್ ಬಿಳಗುಳ ನೇತೃತ್ವದ ಪೀಸ್ ಆ್ಯಂಡ್ ಅವೇರ್ನೆಸ್ ಸಂಸ್ಥೆಯ ಸದಸ್ಯರು ಸ್ಥಳಕ್ಕೆ ಧಾವಿಸಿ ಮಕ್ಕಳ ಸಹಿತ ಸಂಕಷಕ್ಕೆ ಸಿಲುಕಿದ್ದ ಎಂಟು ಮಂದಿಯನ್ನು ಹಾಗೂ ಮೂರು ಹಸುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಹಕರಿಸಿದ್ದಾರೆ

ಈ ಕಾರ್ಯಾಚರಣೆಯಲ್ಲಿ ಗೋಣಿಬೀಡು ಪೊಲೀಸ್ ಸಿಬ್ಬಂದಿ ಜಾಫರ್, ಸಮಾಜ ಸೇವಕರಾದ ಅಬ್ದುಲ್ ರಹಿಮಾನ್, ಮೋನು, ಟಿ.ಕೆ. ಹಸೈನಾರ್, ಅಶ್ರಫ್, ಲತೀಫ್, ಮುಸ್ತಫ, ಕೆ.ಕೆ.ಸಿದ್ದೀಕ್, ಗಣೇಶ್ ಹಾಗೂ ಅಗ್ನಿಶಾಮಕದಳದವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News