ಧಾರವಾಡ: ಮಳೆ ಸಂತ್ರಸ್ತರ ರಕ್ಷಣೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಉಪವಿಭಾಗಾಧಿಕಾರಿ, ಪಿಎಸ್ಸೈಯ ರಕ್ಷಣೆ

Update: 2019-08-07 06:21 GMT

ಧಾರವಾಡ, ಆ.7: ಭಾರಿ ಮಳೆಗೆ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದ ಉಪವಿಭಾಗಾಧಿಕಾರಿ(ಎ.ಸಿ.) ಹಾಗೂ ಪಿಎಸ್ಸೈ ಒಬ್ಬರು ಬೋಟ್ ಎಂಜಿನ್ ಕೆಟ್ಟ ಕಾರಣ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ರಾತ್ರಿಯಿಡೀ ಕಾಲ ಕಳೆದ ಘಟನೆ ನವಲಗುಂದ ತಾಲೂಕಿನ ತುಪ್ಪರಿಹಳ್ಳದ  ಶಿರಕೋಳ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಯಿತು.

ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಂಗಳವಾರ ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳಕ್ಕೆ ಶಿರಕೋಳದಲ್ಲಿ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ಎಂಬವರು ಪ್ರವಾಹದಲ್ಲಿ ಸಿಲುಕಿಒಂಡಿದ್ದರು. ಈ ವಿಷಯ ತಿಳಿದು ಅವರನ್ನು ರಕ್ಷಿಸಲು ನಾಲ್ಕು ಜನ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ತೆರಳಿದ್ದ ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೈರ್, ಪಿಎಸ್ಸೈ ಜಯಪಾಲ ಅವರು ಬೋಟಿನಲ್ಲಿ ತೆರಳಿದ್ದರು. ದಾರಿಮಧ್ಯೆ  ಬೋಟ್ ನ ಇಂಜಿನ್ ಕಲ್ಲಿಗೆ ತಾಗಿ ಹಾನಿಗೀಡಾಗಿದೆ. ಇದರಿಂದ ಬೋಟಿನಲ್ಲಿದ್ದವರು ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಕಾಲ ಕಳೆಯಬೇಕಾಯಿತು.

ಬೆಳಗಿನ ಜಾವ ಮೂರು ಗಂಟೆಗೆ ಮುಳುಗು ತಜ್ಞರು ಅವರನ್ನು ತಲುಪಲು ಯತ್ನಿಸಿದರಾದರೂ ಎಸಿ ಹಾಗೂ ಪಿಎಸ್ಸೈ ಅವರು ಮುಳುಗು ತಜ್ಞರಿಗೆ ಆ ಸಮಯದಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದ್ದರಿಂದ ಅವರು ವಾಪಸ್ ಆಗಿದ್ದರು. ಇಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ಬಾಗಲಕೋಟದಿಂದ ಬಂದ ಮತ್ತೊಂದು ಬೋಟ್ ಮೂಲಕ ಎಲ್ಲಾ ಏಳು ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆತರಲಾಯಿತು.

ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್ಪಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ತಹಶೀಲ್ದಾರ್ ನವೀನ ಹುಲ್ಲೂರ ಸೇರಿದಂತೆ ಅನೇಕರು ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News