ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಕ್ರಮ: ಸಿಎಂ ಯಡಿಯೂರಪ್ಪ

Update: 2019-08-08 13:01 GMT

ಬೆಳಗಾವಿ, ಆ.8: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರಿಸ್ಥಿತಿ ನಿಭಾಯಿಸಲು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸಪೂಜಾರಿ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಸಿ.ಎಂ.ಉದಾಸಿ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವವರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಆಸ್ತಿ ಪಾಸ್ತಿ ನಷ್ಟವಾದವರಿಗೆ ಪರಿಹಾರ ನೀಡಲಾಗುವುದು. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದರು.

ಶಾಸಕರು, ಸಂಸದರ ನೇತೃತ್ವದ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಮೂರು ದಿನ ಉತ್ತರ ಕರ್ನಾಟಕ ಭಾಗದಲ್ಲೆ ವಾಸ್ತವ್ಯ ಹೂಡಲಿದ್ದು, ಪ್ರವಾಹ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ನನ್ನ ನೇತೃತ್ವದ ಸಮೀಕ್ಷಾ ತಂಡದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕರಾದ ಉಮೇಶ್ ಕತ್ತಿ, ಗೋವಿಂದ ಕಾರಜೋಳ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಇರಲಿದ್ದು, ಈ ತಂಡವು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡದಲ್ಲಿ ಸಂಸದ ಶಿವಕುಮಾರ್ ಉದಾಸಿ, ಬಸವರಾಜ ಬೊಮ್ಮಾಯಿ, ದಿನಕರ ಶೆಟ್ಟಿ ಇರಲಿದ್ದು, ಈ ತಂಡವು ಧಾರವಾಡ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡದಲ್ಲಿ ಶಾಸಕರಾದ ಸಿ.ಟಿ.ರವಿ, ವಿ.ಸೋಮಣ್ಣ, ಸಂಸದರಾದ ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಕೆ.ಜಿ.ಬೋಪಯ್ಯ, ಪ್ರೀತಮ್‌ಗೌಡ ಇರಲಿದ್ದು, ಈ ತಂಡವು ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ರಚಿಸಲಾಗುವ ತಂಡವು ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿ, ಪರಿಹಾರ ಕಾರ್ಯಗಳ ನೇತೃತ್ವ ವಹಿಸಲಿವೆ ಎಂದು ಯಡಿಯೂರಪ್ಪ ಹೇಳಿದರು.

ಬಿಎಸ್‌ವೈ-ರಾಜನಾಥ್‌ಸಿಂಗ್ ಮಾತುಕತೆ: ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಕರ್ನಾಟಕ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವು ನೀಡಲಾಗುವುದು. ಸೇನಾ ಹೆಲಿಕಾಪ್ಟರ್ ಹಾಗೂ ಅಗತ್ಯ ಕೇಂದ್ರ ರಕ್ಷಣಾ ತಂಡಗಳನ್ನು ರಾಜ್ಯಕ್ಕೆ ಇಂದು ಸಂಜೆಯೊಳಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರ ಸಿಎಂ ಕರೆ: ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಕೊಯ್ನಿ ಜಲಾಶಯದಿಂದ ಐದು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಿದ್ದು, ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಅಪಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ನೀರು ಬಿಡುಗಡೆ ಮಾಡುವುದು ಅನಿವಾರ್ಯ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೇವೇಂದ್ರ ಫಡ್ನವಿಸ್ ಕೋರಿದ್ದಾರೆ.

ಆಲಮಟ್ಟಿ ಜಲಾಶಯದಿಂದ ಸುಮಾರು ನಾಲ್ಕು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಗ್ಗು ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ. ಗೋಕಾಕ್ ಫಾಲ್ಸ್ ಭೋರ್ಗರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶವನ್ನು ಪೊಲೀಸರು ನಿಷೇಧಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News