ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ; ಉಕ್ಕಿ ಹರಿಯುತ್ತಿದೆ ನದಿಗಳು

Update: 2019-08-08 06:10 GMT

ಚಿಕ್ಕಮಗಳೂರು, ಆ.8: ಮಲೆನಾಡಿನಲ್ಲಿ ಇಂದು ಕೂಡಾ ಗಾಳಿಮಳೆ ಆರ್ಭಟ ಮುಂದುವರಿದಿದ್ದು, ಮನೆ ಮೇಲೆ ಮರಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಹೇಮಾವತಿ, ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ಐದಾರು ದಿನಗಳ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೃಹತ್ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಕೊಪ್ಪದ ಹೊಸ ರೋಡ್ ಗ್ರಾಮದಲ್ಲಿ ನಡೆದಿದೆ. ಘಟನೆಯ ಸಂದರ್ಭ ಮನೆಯಲ್ಲಿದ್ದ ಚಂದನ, ರಘು, ರೂಪಾ ಹಾಗೂ ಮೀನಾ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಳೆಹೊನ್ನೂರು ಕಳಸ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲೂ ಮಳೆ ಆರ್ಭಟಕ್ಕೆ ಅಲ್ಲಲ್ಲಿ ಅನಾಹುತ ಸಂಭವಿಸಿರುವುದು ವರದಿಯಾಗಿದೆ. ಜಾವಳಿ ಬಳಿ ದರೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದರೆ, ಗೋಣಿಬೀಡು ಸುಬ್ರಹ್ಮಣ್ಯ ದೇವಾಲಯದ ಮೆಟ್ಟಿಲುಗಳು ಹೇಮಾವತಿ ನದಿ ನೆರೆ ನೀರಿನಿಂದ ಜಲಾವೃತಗೊಂಡಿದೆ. ಇದೇವೇಳೆ ದೇವಾಲಯದ ನೂರಾರು ವರ್ಷದ ಹಳೆಯ ಬೃಹತ್ ಅರಳೀಮರ ಧರೆಗುರುಳಿದೆ. ಹೇಮಾವತಿ ನದಿ ಉಕ್ಕಿ ಹರಿದು ತೀರದ ಜಮೀನುಗಳಿಗೆ ನುಗ್ಗಿದ್ದರಿಂದ ಅಪಾ ಕೃಷಿ ನಾಶನಷ್ಟ ಉಂಟಾಗಿದೆ.

ಶೃಂಗೇರಿ, ಕೊಪ್ಪದಲ್ಲೂ ಭಾರೀ ಮಳೆ ಮುಂದುವರಿದಿದೆ. ತುಂಗಾ ನದಿ ಪ್ರವಾಹದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ತೀರದ ಹಲವು ಭಾಗಗಳು ಜಲಾವೃತಗೊಂಡಿವೆ.

ಶೃಂಗೇರಿ ಮಠದ ಗುರು ಭವನ ಹಾಗೂ ಗಾಂಧಿ ಮೈದಾನಕ್ಕೆ ನೆರೆ ನೀರು ನುಗ್ಗಿದೆ. ಶೃಂಗೇರಿಯ ಕೆರೆ ಕಟ್ಟೆ, ಎಸ್.ಕೆ.ಬಾರ್ಡರ್, ಕಿಗ್ಗಾದಲ್ಲೂ ಭಾರೀ ಮಳೆಯಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News