ಆಲಮಟ್ಟಿ ಹಿನ್ನೀರಿನಿಂದ ಮಹಾರಾಷ್ಟ್ರಕ್ಕೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

Update: 2019-08-08 12:35 GMT

ಬೆಳಗಾವಿ, ಆ.8: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸಿದರೂ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಗುರುವಾರ ಬೆಳಗಾವಿ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಿಕ್ಕೋಡಿಯ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪುಅಭಿಪ್ರಾಯ ಮೂಡಿಸುವ ವರದಿಗಳು ಪ್ರಕಟವಾಗುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆಲಮಟ್ಟಿಯಿಂದ ಸಾಂಗ್ಲಿ ಹಾಗೂ ಕೊಲ್ಲಾಪುರ ಬಹಳ ದೂರದಲ್ಲಿವೆ. ಆದುದರಿಂದ, ಈ ಜಲಾಶಯಗಳ ಹಿನ್ನೀರು ಆ ಜಿಲ್ಲೆಯ ವ್ಯಾಪ್ತಿಯವರೆಗೆ ನಿಲ್ಲುವುದಿಲ್ಲ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123 ಟಿಎಂಸಿ ನೀರು ಸಂಗ್ರಹಿಸಬಹುದು. ಆದರೆ ಸದ್ಯಕ್ಕೆ ಕೇವಲ 85 ಟಿಎಂಸಿ ನೀರು ಮಾತ್ರ ಇದೆ. ಅದೇ ರೀತಿ ನಾರಾಯಣಪುರ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 33 ಟಿಎಂಸಿ ಸದ್ಯ 18 ಟಿಎಂಸಿ ಮಾತ್ರ ನೀರಿದೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ಜಲಾಶಯಗಳಲ್ಲಿ ನೀರು ಸಂಗ್ರಹದಿಂದ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಮ್ಮಿಂದ ಅವರಿಗೆ ತೊಂದರೆಯಾಗಲು ಬಿಡುವುದಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಜೊತೆ ಈಗಾಗಲೇ ಈ ಬಗ್ಗೆ ಮೂರು ಬಾರಿ ಚರ್ಚೆ ಮಾಡಿದ್ದೇನೆ. ಅಲ್ಲಿನ ಕೆಲ ಮಾಧ್ಯಮಗಳಲ್ಲಿ ತಪ್ಪುಮಾಹಿತಿ ಪ್ರಕಟವಾಗುತ್ತಿರುವುದರಿಂದ ಮತ್ತೇ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಐದು ಸಾವಿರ ಕೋಟಿ ಅಗತ್ಯ: ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು 5 ಸಾವಿರ ಕೋಟಿ ರೂ.ಅಗತ್ಯವಿದೆ. 30 ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ. ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಒಂದು ವಾರದ ಬಳಿಕ ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು ಹತ್ತು ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿ ಇದೇ ವೇಳೆ ಧನ್ಯವಾದ ಸಲ್ಲಿಸಿದರು. ಅಲ್ಲದೇ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ದಾನಿಗಳು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

2005ರಲ್ಲಿ ಇದೇ ರೀತಿ ಪ್ರವಾಹ ಬಂದಾಗ ದಾನಿಗಳು 1500 ಕೋಟಿ ರೂಪಾಯಿಗಳ ದೇಣಿಗೆ ನೀಡುವ ಮೂಲಕ ಸಂತ್ರಸ್ತರಿಗೆ ಆಸರೆಯಾಗಿದ್ದರು. ಸುಧಾಮೂರ್ತಿ ಹತ್ತು ಕೋಟಿ ರೂ.ನೀಡುವ ಮೂಲಕ ಉಳಿದ ದಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ದಂಪತಿ ರಕ್ಷಣೆ-ಸಿಎಂ ಸಂತಸ: ಪ್ರವಾಹಕ್ಕೆ ಸಿಲುಕಿ ಬೆಳಗಾವಿ ತಾಲ್ಲೂಕಿನ ಕಬಲಾಪುರ ಗ್ರಾಮದ ಮನೆಯೊಂದರ ಮೇಲೆ ಸುಮಾರು ನಲವತ್ತು ತಾಸುಗಳಿಂದ ಕುಳಿತಿದ್ದ ಕಾಳಪ್ಪ-ರತ್ನವ್ವ ದಂಪತಿಯನ್ನು ರಕ್ಷಿಸಿರುವುದಕ್ಕೆ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಸಕ್ತಿಯಿಂದಾಗಿ ಎರಡು ವಿಶೇಷ ಹೆಲಿಕಾಪ್ಟರ್ ಬಂದಿದ್ದು, ರಕ್ಷಣಾ ಕಾರ್ಯಕ್ಕಾಗಿ ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ. ಇನ್ನೂ ಹೆಚ್ಚಿನ ರಕ್ಷಣಾ ದೋಣಿ ಹಾಗೂ ಹೆಲಿಕಾಪ್ಟರ್ ಒದಗಿಸುವ ಮೂಲಕ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗುವುದು. ಜನರು ಎಲ್ಲೇ ಸಂಕಷ್ಟದಲ್ಲಿದ್ದರೂ ಅವರ ರಕ್ಷಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸಿಎಂ ಜತೆ ಚರ್ಚೆ: ಉಭಯ ರಾಜ್ಯಗಳ ಜಲಾಶಯಗಳಲ್ಲಿ ನೀರು ಸಂಗ್ರಹ ಮತ್ತು ಬಿಡುಗಡೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಜತೆ ಖುದ್ದಾಗಿ ಮಾತನಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಳೆಯ ಸಂದರ್ಭದಲ್ಲಿ ಜಲಾಶಯಗಳಿಂದ ದಿಢೀರ್ ನೀರು ಬಿಡುಗಡೆ ಮಾಡುವುದರಿಂದ ಉಭಯ ರಾಜ್ಯಗಳ ನದಿಪಾತ್ರದ ಜನರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಿ, ಸಮನ್ವಯತೆ ಸಾಧಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಉಭಯ ರಾಜ್ಯಗಳ ಜಲಾಶಯದಲ್ಲಿ ನೀರು ಸಂಗ್ರಹಣೆ ಹಾಗೂ ಹಿನ್ನೀರಿನಿಂದ ಉಂಟಾಗುವ ಪರಿಣಾಮಗಳ ಕುರಿತು ಅಧಿಕಾರಿಗಳು ಉನ್ನತಮಟ್ಟದ ಸಭೆ ನಡೆಸುವ ಮೂಲಕ ಪರಸ್ಪರ ಮಾಹಿತಿ ವಿನಮಯ ಮಾಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಗಣೇಶ್ ಹುಕ್ಕೇರಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಪಿ.ರಾಜೀವ್, ದುರ್ಯೋಧನ ಐಹೊಳೆ, ಸಿದ್ದು ಸವದಿ, ವಿಧಾನಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ಹನುಮಂತ ನಿರಾಣಿ, ಮುಖ್ಯಮಂತ್ರಿಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News