"ಅತೃಪ್ತ ಶಾಸಕರಿಗೆ 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು, ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ"

Update: 2019-08-08 13:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 8: ‘ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮೊಮ್ಮಗಳಿಗೆ ಮದುವೆ ಚಿಂತೆಯಂತೆ’ ಹಾಗೆಯೇ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಇತ್ತ ಯಡಿಯೂರಪ್ಪನವರು ತಂಗಿ ಮಗನಿಗೆ ಹಾಲು ಉತ್ಪಾದಕರ ಒಕ್ಕೂಟಕ್ಕೆ ನೇಮಕಾತಿ ಮಾಡೋದ್ರಲ್ಲಿ ನಿರತರಾಗಿದ್ದಾರೆ’ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಗುರುವಾರ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಜೆಡಿಎಸ್, ‘ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು. ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ! ಎಂದು ಲೇವಡಿ ಮಾಡಿದೆ.

‘ಪ್ರವಾಹದಿಂದ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳು ಮುಳುಗಿ ಹೋಗಿವೆ. ಸರಕಾರ ನಮ್ಮನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರು ಸಹಾಯಕ್ಕಾಗಿ ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ, ಆದರೆ ಸರಕಾರ ಇವರ ನೆರವಿಗೂ ಬಾರದೇ, ಸೇನಾ ಹೆಲಿಕಾಪ್ಟರ್ ನೆರವು ಕೂಡ ಕೇಳದೇ ಇರುವುದು ದುರದೃಷ್ಟಕರ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಜನರು ನರಳುತ್ತಿದ್ದಾರೆ. ಇದುವರೆಗೂ ಸರಕಾರ ಗಂಜಿ ಕೇಂದ್ರಗಳನ್ನು ಸ್ಥಾಪಿಸಿಲ್ಲ, ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಮುಖ್ಯಮಂತ್ರಿ ಇಲ್ಲ, ಮಂತ್ರಿಗಳೂ ಇಲ್ಲ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ’ ಎಂದು ಪಕ್ಷ ಟ್ವಿಟ್ಟರ್ ಮೂಲಕ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News