ಸಕಲೇಶಪುರ: ಮುಂದುವರಿದ ಮಳೆ ಆರ್ಭಟ, ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

Update: 2019-08-08 15:31 GMT

ಸಕಲೇಶಪುರ, ಆ.8: ತಾಲೂಕಿನಲ್ಲಿ ಇಂದು ಸಹ ಆಶ್ಲೇಷ ಮಳೆ ಆರ್ಭಟ ಮುಂದುವರಿದಿದ್ದು, ಮಲೆನಾಡು ಭಾಗದಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ತಾಲೂಕಿನ ಬಹುತೇಕ ಭಾರೀ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಮೇಲೆ ಮರ ಸಮೇತ ಗುಡ್ಡ ಕುಸಿದ ಘಟನೆ ಕಾಡುಮನೆ ರಸ್ತೆಯಲ್ಲಿ ನಡೆದಿದ್ದು, ಸಂಚಾರ ಬಂದ್ ಆಗಿದೆ. ಪಟ್ಟಣದ ಆಝಾದ್ ರಸ್ತೆಗೆ ನುಗ್ಗಿದ ನದಿ ನೀರಿನಿಂದ ಮನೆಗಳು, ರಸ್ತೆ, ಜಮೀನು ಸಂಪೂರ್ಣ ಜಲಾವೃತವಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಮುಳುಗಡೆಯಾಗಿದೆ. ಪಟ್ಟಣದ ಅಝಾದ್ ರಸ್ತೆ, ಮಲ್ಲಮ್ಮನ ಬೀದಿ, ಷಣ್ಮುಕಯ್ಯ ರಸ್ತೆ, ಲಬಾಬಿನ್ ಮಸೀದಿ ರಸ್ತೆ, ಹಿಂದೂ ರುದ್ರಭೂಮಿ ಸಂಪೂರ್ಣ ಜಲಾವೃತವಾಗಿದೆ, ಸುಮಾರು ನೂರಕ್ಕು ಹೆಚ್ಚು ಅಂಗಡಿಗಳೂ ನೀರಿನಲ್ಲಿ ಮುಳುಗಿದೆ. 

ಸಕಲೇಶಪುರ ಸೇರಿ ಹಲವು ತಾಲೂಕುಗಳ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಪಟ್ಟಣದಲ್ಲಿ ಹೇಮಾವತಿ ನದಿಗೆ ಹೊಂದಿಕೊಂಡಂತೆ ಇರುವ ಹೊಳೆ ಮಲ್ಲೇಶ್ವರ ದೇವಾಲಯ ಮುಳುಗಿದೆ. ಹೇಮಾವತಿ ನದಿಯಲ್ಲಿ 48.133 ಕ್ಯೂಸೆಕ್ ನೀರು ಹರಿಯುತ್ತಿದ್ದು, ಚಾರ್ಮಾಡಿಘಾಟ್ ಬಂದ್ ಆಗಿರುವುದರಿಂದ ಎಲ್ಲಾ ವಾಹನಗಳೂ ಶಿರಾಡಿ ಮಾರ್ಗವಾಗಿ ಸಂಚರಿಸುತ್ತಿದ್ದು, ಇದರಿಂದ ಸಕಲೇಶಪುರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಶಿರಾಡಿಭಾಗದಲ್ಲಿ ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ. ಸಕಲೇಶಪುರ ಶಿರವಾಗಿಲು ನಡುವೆ ಭೂ ಕುಸಿತ ಉಂಟಾಗಿರುವುದರಿಂದ ರೈಲು ಸಂಚಾರ ಬಂದ್ ಆಗಿದೆ. ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅಧಿಕಾರಿಗಳ ಸಭೆ ನಡೆಸಿದರು.

ಮಳೆ ಹಾನಿ ಪ್ರದೇಶಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ
ಮಳೆ ಹಾನಿ ಪ್ರದೇಶಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತನಾಡಿ, ಸಕಲೇಶಪುರದಿಂದ ಪ್ರವಾಸ ಆರಂಭಿಸಿದ್ದೇನೆ. ಬೇಲೂರು ಸೇರಿದಂತೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಕಲೇಶಪುರದಲ್ಲಿ ಸಂತ್ರಸ್ಥರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗಂಜಿ ಕೇಂದ್ರ ತೆರೆದು ಆಹಾರ ಪೂರೈಕೆ ಮಾಡಲಾಗುತ್ತಿದೆ. ನಾಳೆ ಡಿಸಿ ನೇತೃತ್ವದಲ್ಲಿ ಎಲ್ಲಾ ಜನಪ್ರತಿನಿಧಿಗಳ ಸಭೆ ಮಾಡಲಾಗುವುದು. ಸಭೆಯಲ್ಲಿ ಮಳೆ ನಷ್ಟದ ಮಾಹಿತಿ ಪಡೆದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತೇವೆ. ಶೀಘ್ರ ವಿಶೇಷ ಆದ್ಯತೆ ಮೇರೆಗೆ ಹಣ ಬಿಡುಗಡೆಗೆ ಒತ್ತಾಯಿಸುತ್ತೇನೆ. ಪರಿಹಾರ ಬಿಡುಗಡೆ ಸಂಬಂಧ ಸಿಎಂ ಭೇಟಿಗೂ ನಿರ್ಧಾರ ಮಾಡಿದ್ದೇನೆ. ಸಮ್ಮಿಶ್ರ ಸರಕಾರದ ಕಾರ್ಯವೈಖರಿ ಟೀಕಿಸುತ್ತಿದ್ದರು ಈಗ ಏನು ಮಾಡುತ್ತಿದ್ದಾರೆ. ಯಡಿಯೂರಪ್ಪ ಕೂಡಲೇ ಹಾನಿ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಒತ್ತಾಯ ಮಾಡುತ್ತೇನೆ. ಅವರ ರಾಜಕೀಯ ಏನೇ ಇರಲಿ, ಆ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದರು ಈಗ ಮಂತ್ರಿ ಮಂಡಲ ರಚನೆ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News