ಜಮ್ಮು- ಕಾಶ್ಮೀರದಲ್ಲಿ ಹದಗೆಟ್ಟ ಮಾನವಹಕ್ಕು ಪರಿಸ್ಥಿತಿ

Update: 2019-08-08 16:03 GMT

ಹೊಸದಿಲ್ಲಿ, ಆ. 8: ಕಾಶ್ಮೀರದ ಪರಿಸ್ಥಿತಿ ಬಗ್ಗೆ ಬುಧವಾರ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ), ಕಣಿವೆ ಪ್ರದೇಶದಿಂದ ಪ್ರಸ್ತುತ ಯಾವುದೇ ಮಾಹಿತಿ ಬರದಿರುವುದು ಅತ್ಯಂತ ಕಳವಳಕಾರಿ ವಿಚಾರ ಎಂದಿದೆ.

ಭಾರತ ಅಂಗೀಕರಿಸಿದ ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಡಂಬಡಿಕೆ ಅಡಿಯಲ್ಲಿ ಮಾಹಿತಿ ನೀಡುವ, ಕೋರುವ ಹಾಗೂ ಸ್ವೀಕರಿಸುವುದು ಸಹಿತ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ ಎಂದು ಯುಎನ್‌ಎಚ್‌ಆರ್‌ಸಿಯ ವಕ್ತಾರ ಹೇಳಿದ್ದಾರೆ. ‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ’ ಕುರಿತ ಯುಎನ್‌ಎಚ್‌ಆರ್‌ಸಿಯ 2019 ಜುಲೈ 8ರ ವರದಿಯನ್ನು ನಾನು ಉಲ್ಲೇಖಿಸುತ್ತೇನೆ. ಈ ವರದಿಯಲ್ಲಿ ಆಡಳಿತ ಭಿನ್ನಾಭಿಪ್ರಾಯ ಹತ್ತಿಕ್ಕಲು ಸಂವಹನ ಜಾಲವನ್ನು ಮತ್ತೆ ಮತ್ತೆ ಬ್ಲಾಕ್ ಮಾಡಿದೆ, ರಾಜಕೀಯ ಭಿನ್ನಮತಿಯರನ್ನು ಶಿಕ್ಷಿಸಲು ನಿರಂಕುಶವಾಗಿ ಬಂಧಿಸಲಾಗಿದೆ, ನ್ಯಾಯ ಬಾಹಿರ ಹಾಗೂ ಗಂಭೀರ ಗಾಯಗಳಿಗೆ ಕಾರಣವಾಗುವ ಪ್ರತಿಭಟನೆಯನ್ನು ನಿರ್ವಹಿಸಲು ಹೆಚ್ಚುವರಿ ಪಡೆಗಳ ನಿಯೋಜಿಸಿದೆ ಎಂಬ ವಿವರಗಳನ್ನು ದಾಖಲಿಸಲಾಗಿದೆ ಎಂದರು.

ಇತ್ತೀಚೆಗಿನ ನಿರ್ಬಂಧಗಳು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಜಕೀಯ ನಾಯಕರ ನಿರಂಕುಶ ವಶ ಹಾಗೂ ಶಾಂತಿಯುತವಾಗಿ ಗುಂಪು ಸೇರುವುದಕ್ಕೆ ನಿರ್ಬಂಧದ ವರದಿಯನ್ನು ಉಲ್ಲೇಖಿಸಿದ ಅವರು, ಇದು ಜಮ್ಮು ಹಾಗೂ ಕಾಶ್ಮೀರದ ಭವಿಷ್ಯದ ಸ್ಥಿತಿಗತಿ ಕುರಿತ ಪ್ರಜಾಸತ್ತಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಈ ವಲಯದ ರಾಜಕೀಯ ನಾಯಕರು ಹಾಗೂ ಜನರಿಗೆ ತಡೆ ಒಡ್ಡಿದೆ ಎಂದರು.

ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಕಲಂ 370ನ್ನು ಭಾರತ ಸರಕಾರ ಸೋಮವಾರ ರದ್ದುಗೊಳಿಸಿತ್ತು. ಅಲ್ಲದೆ ರಾಜ್ಯವನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News