ಐಡಿಐಎ ಸ್ಥಾಪಕ, ಕಾನೂನು ತಜ್ಞ ಶಮ್ನಾಡ್ ಬಶೀರ್ ಮೃತದೇಹ ಪತ್ತೆ

Update: 2019-08-08 16:26 GMT

ಚಿಕ್ಕಮಗಳೂರು, ಆ. 8: ಖ್ಯಾತ ಕಾನೂನು ತಜ್ಞ ಶಮ್ನಾಡ್ ಬಶೀರ್ (43) ಅವರ ಮೃತದೇಹ ಚಿಕ್ಕಮಗಳೂರಿನ ಬಾಬಾಬುಡಾನ್‌ಗಿರಿ ಸಮೀಪ ಗುರುವಾರ ಪತ್ತೆಯಾಗಿದೆ.

ಶಮ್ನಾಡ್ ಅವರು ಸ್ಥಾಪಿಸಿದ ಐಡಿಐಎ (ಇಂಕ್ರೀಸಿಂಗ್ ಡೈವರ್ಸಿಟಿ ಬೈ ಇಂಕ್ರೀಸಿಂಗ್ ಆ್ಯಕ್ಸಸ್ ಟು ಲೀಗಲ್ ಎಜುಕೇಶನ್) ಈ ಸುದ್ದಿಯನ್ನು ದೃಢಪಡಿಸಿದೆ. ಶಮ್ನಾಡ್ ಅವರು ಮನಃಶಾಂತಿಗಾಗಿ ಸಾಮಾನ್ಯವಾಗಿ ಬಾಬಾಬುಡನ್‌ಗಿರಿಯ ಬೆಟ್ಟ ಪ್ರದೇಶಗಳಿಗೆ ತೆರಳುತ್ತಾರೆ. ಅವರು ಆಗಸ್ಟ್ 5ರಂದು ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಅವರು ಸಂಪರ್ಕಕ್ಕೆ ಸಿಗತ್ತಿರಲಿಲ್ಲ. ನಾವು ಬುಧವಾರ ಅವರಿಗಾಗಿ ಶೋಧ ನಡೆಸಿದೆವು. ಗುರುವಾರ ಬಾಬಾಬುಡನ್‌ಗಿರಿ ಸಮೀಪ ಇದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಬಾಬಾಬುಡಾನ್ ಗಿರಿ ಸಮೀಪ ಭೂಕುಸಿತವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದರ್ಭ ಬಷೀರ್ ಅವರು ಕಾರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಅವರ ಮೃತದೇಹವನ್ನು ಹೊರಗೆ ತೆಗೆಯಲು ಹಲವು ಗಂಟೆಗಳು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅನಂತರ ಗುರುವಾರ ಸಂಜೆ 7.30ಕ್ಕೆ ಮೃತದೇಹವನ್ನು ಹೊರ ತೆಗೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

‘‘ಇದು ಕೊಲೆ ಎಂದು ಶಂಕಿಸಲು ಸಾಧ್ಯವಿಲ್ಲ. ಅವರು ಕಾರಿನ ಒಳಗೆ ನಿದ್ರಿಸಿರುವ ಸಾಧ್ಯತೆ ಇದೆ. ಆದರೆ ಹೀಟರ್ ಆಪ್ ಮಾಡಲು ಮರೆತಿದ್ದಾರೆ. ಇಗ್ನೀಷಿಯನ್‌ನಲ್ಲೇ ಕೀ ಇತ್ತು. ಕಳೆದ 5 ದಿನಗಳಿಂದ ಅವರ ಸಂಪರ್ಕ ಸಿಗುತ್ತಿರಲಿಲ್ಲ. ಈ ಬಗ್ಗೆ ಆಗಸ್ಟ್ 3ರಂದು ಅವರ ಸಹೋದರ ದೂರು ದಾಖಲಿಸಿದ್ದರು. ನಾವು ನಿನ್ನೆ ಕೂಡ ಶೋಧ ನಡೆಸಿದೆವು. ಆದರೆ, ಕಾರು ಸಿಕ್ಕಿರಲಿಲ್ಲ. ಇಂದು ನಾವು ವ್ಯಾಪಕ ಶೋಧ ನಡೆಸಿದೆವು. ಕಾರು ಪತ್ತೆಯಾದ ಸ್ಥಳದಲ್ಲಿ ಮಂಜು ಮುಸುಕಿತ್ತು. ಯಾವುದೂ ಕಾಣಿಸುತ್ತಿರಲಿಲ್ಲ’’ ಎಂದು ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕ ಹರೀಶ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News