ಕರಾವಳಿ-ಮಲೆನಾಡು ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ

Update: 2019-08-08 16:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಅತಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹವಾಗುವ ಸೂಚನೆಗಳು ಕಂಡುಬರುತ್ತಿದೆ ಎಂದು ರಾಜ್ಯ ಸರಕಾರ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರ ಹಾಗೂ ಕೃಷ್ಣಾ ಮೇಲ್ದಂಡೆ ಪ್ರದೇಶದಲ್ಲಿ ಹೆಚ್ಚಿನ ಮಳೆ ಮುಂದುವರಿದಿದ್ದು, ಐಎಂಡಿ ಪ್ರಕಾರ ಮಳೆಯ ಪ್ರಮಾಣ ನಾಳೆಯಿಂದ ಕಡಿಮೆ ಆಗುವ ಮುನ್ಸೂಚನೆ ಇದೆ. ಇಂದು(ಆ.8) ಬೆಳಗ್ಗೆ 8 ಗಂಟೆ ವೇಳೆಗೆ ಮಹಾರಾಷ್ಟ್ರದಿಂದ ಬಿಡುಗಡೆಯಾಗಿರುವ 3.85 ಲಕ್ಷ ಕ್ಯೂಸೆಕ್ಸ್ ನೀರು ಬೆಳಗಾವಿ ಜಿಲ್ಲೆಯ ಗಡಿ ತಲುಪಿದೆ. ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂದಿನ ಐದು ದಿನಗಳಲ್ಲಿ ಚದುರಿದಂತೆ ಸಾಧಾರಣ ಹಾಗೂ ಭಾರಿ ಮಳೆಯಾಗುವ ಸಂಭವವಿದೆ. ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ 1-2 ದಿನ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆ ಬೀಳುವ ಸಂಭವವಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಂಭವವಿದೆ.

ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀ.ಇದ್ದು, ಇಂದಿನ ಮಟ್ಟ 517.10 ಮೀ.ತಲುಪಿದೆ., ಜಲಾಶಯಕ್ಕೆ ಒಳ ಹರಿವು 3.55 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರ ಹರಿವು 3.55 ಲಕ್ಷ ಕ್ಯೂಸೆಕ್ಸ್ ಇದೆ. ನಾರಾಯಣಪುರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಇದ್ದು, ಇಂದಿನ ಮಟ್ಟ 488.28 ಮೀ.ತಲುಪಿದೆ. ಜಲಾಶಯಕ್ಕೆ ಒಳಹರಿವು 3.95 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರ ಹರಿವು 4.14 ಲಕ್ಷ ಕ್ಯೂಸೆಕ್ಸ್ ಇದೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಭೂ ಸೇನೆಗಳು ಜಂಟಿ ಕಾರ್ಯಾಚರಣೆ ನಡೆಸಿ 43,858 ಜನರನ್ನು ರಕ್ಷಿಸಲಾಗಿದೆ. ಭಾರತಿಯ ವಾಯುಪಡೆಯ 2 ಹೆಲಿಕಾಪ್ಟರ್ ಅನ್ನು ಬೆಳಗಾವಿ ಜಿಲ್ಲೆ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಇನ್ನು ಒಂದು ಹೆಚ್ಚಿನ ಹೆಲಿಕಾಪ್ಟರ್ ಅನ್ನು ಕಳುಹಿಸಿಕೊಡುವಂತೆ ಕೋರಿ ಭಾರತೀಯ ಏರ್ ಆಫೀಸರ್ ಕಮಾಂಡಿಗ್ ಅವರಿಗೆ ಕೋರಲಾಗಿದೆ. ಪ್ರಾಥಮಿಕ ವರದಿಯಂತೆ ಬೆಳಗಾವಿ ಜಿಲ್ಲೆಯಲ್ಲಿ 1410 ಕಿ.ಮೀ.ರಸ್ತೆ, 211 ಸೇತುವೆಗಳು/ಸಿ.ಡಿ., 4019 ಸರಕಾರಿ ಕಟ್ಟಡಗಳು, 92 ನೀರು ಸರಬರಾಜು ಸೌಲಭ್ಯಗಳು, 2575 ವಿದ್ಯುತ್ ಕಂಬಗಳು ಮತ್ತು 4 ಶೌಚಾಲಯವು ಸೇರಿದಂತೆ ಮೂಲಭೂತ ಸೌಕರ್ಯಗಳ ಹಾನಿಯಾಗಿದೆ.

ಅಲ್ಲಲ್ಲಿ ಸಣ್ಣ ಪ್ರಮಾಣದ ಭೂ-ಕುಸಿತದ ಪ್ರಕರಣಗಳು ಹಾಗೂ ಬೃಹತ್ ಗಾತ್ರದ ಮರಗಳು ಬಿದ್ದಿರುವ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66, 275 ಹಾಗೂ ರಾಜ್ಯ ಹೆದ್ದಾರಿ 91(ವಿರಾಜಪೇಟೆ-ಮಾಕುಟಾ) ಅಲ್ಪ ಪ್ರಮಾಣದ ಹಾನಿಯಾಗಿದೆ. ಪ್ರವಾಹದಿಂದ ಹಾನಿಯಾಗಿರುವ/ನಷ್ಟಗಳ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News