ದಕ್ಷಿಣ ಕೊಡಗಿನಲ್ಲಿ ಭಾರೀ ಮಳೆ: ಮಳೆಹಾನಿ ಪರಿಹಾರ ಕಾರ್ಯಾಚರಣೆಗೆ ಸೇನಾ ಸಹಕಾರ

Update: 2019-08-08 17:25 GMT

ಮಡಿಕೇರಿ, ಆ.8 : ಕೊಡಗು- ಕೇರಳ ಗಡಿಭಾಗದಲ್ಲಿರುವ ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಗುತ್ತಿರುವುದರಿಂದ ಈ ಭಾಗದ ಪರಿಹಾರ ಕಾರ್ಯಗಳಿಗಾಗಿ ಸೇನಾ ಸಹಕಾರವನ್ನು ಪಡೆಯಲಾಗಿದೆ.

ಕಣ್ಣೂರು ಡಿಎಸ್‍ಸಿ ಸೆಂಟರ್ ನ ಎರಡು ತುಕಡಿಗಳನ್ನು ಜಿಲ್ಲೆಯ ಗಡಿಭಾಗವಾದ ಕೇರಳಕ್ಕೆ ಸೇರಿದ ವಯನಾಡು ಮತ್ತು ಕೊಡಗಿನ ವೀರಾಜಪೇಟೆ ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಪ್ರತಿ ತುಕಡಿಯಲ್ಲಿ ಒಬ್ಬ ಅಧಿಕಾರಿ, ಮೂವರು ಜೂನಿಯರ್ ಕಮಿಷನ್ಡ್ ಆಫೀಸರ್ಸ್ ಹಾಗೂ 55 ಮಂದಿ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ.

ಕೊಡಗು ಜಿಲ್ಲೆಯ ಪರಿಹಾರ ಕಾರ್ಯದ ನೇತೃತ್ವವನ್ನು ಕಣ್ಣೂರು ಡಿಎಸ್‍ಸಿ ಸೆಂಟರ್‍ನ ಲೆಫ್ಟಿನೆಂಟ್ ಕರ್ನಲ್ ಅರುಣ್ ಪ್ರಕಾಶ್ ವಹಿಸಿದ್ದಾರೆ. ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಕೀರೆ ಹೊಳೆ ಪ್ರವಾಹ ಅಪಾಯದ ಮಟ್ಟವನ್ನು ಮೀರಿದ್ದು, ಸ್ಥಳೀಯ ನಿವಾಸಿಗಳನ್ನು ಪಕ್ಕದ ಮಾದರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಲ್ಲಿ ಎನ್‍ಡಿಆರ್‍ಎಫ್ ತಂಡ ಅಲ್ಲಿನ ನಿವಾಸಿಗಳನ್ನು ಕರೆ ತಂದರು.

ಕಳೆದ ವರ್ಷ ಭಾರೀ ಅನಾಹುತಕ್ಕೆ ಸಾಕ್ಷಿಯಾಗಿದ್ದ ಕಾಲೂರು, ಹಟ್ಟಿಹೊಳೆ, ಗಾಳಿಬೀಡು, ವಣಚಲು ಕುಗ್ರಾಮ ವ್ಯಾಪ್ತಿಯಲ್ಲಿ ಬರೆಗಳು ಕುಸಿದಿದ್ದು, ಜಿಲ್ಲಾಡಳಿತ ತಕ್ಷಣ ತೆರವು ಕಾರ್ಯಾಚರಣೆ ನಡೆಸಿತು.

ಕೆದಕಲ್, ಹಾಲೇರಿ ರಸ್ತೆಯ ತಡೆಗೋಡೆ ಕುಸಿದು ಬಿದ್ದಿದೆ. ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಕುಂಬಾರಗುಡಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಮಡಿಕೇರಿ ವೀರಾಜಪೇಟೆ ರಾಜ್ಯ ಹೆದ್ದಾರಿ ಕಾವೇರಿ ನದಿ ಪಾತ್ರದ ಬೇತ್ರಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆಯಾದರೆ, ಕದನೂರು ಗ್ರಾಮದ ಬಳಿಯಲ್ಲಿ ಮುಖ್ಯ ರಸ್ತೆ ಪ್ರವಾಹದಿಂದ ಮುಳುಗಡೆಯಾಗಿರುವ ಬಗ್ಗೆ ವರದಿಯಾಗಿದೆ. 

ಕುಟ್ಟ ಸಮೀಪದ ಪೂಜೆಕಲ್ಲು ಕಾಳಿ ದೇವಾಲಯ ಮುಳುಗಡೆಯಾಗಿದೆ. ಚೌಡ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯು ಕಿಬ್ಬೆಟ್ಟ ರಸ್ತೆ ಸಂಪೂರ್ಣ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ. ಕುಶಾಲನಗರದಲ್ಲಿ ಸುರಿದ ಭಾರೀ ಮಳೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ನೀರು ನುಗ್ಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಯಿತು. ಇಲ್ಲಿಗೂ ಡಿಸಿ, ಎಸ್‍ಪಿ, ಸಿಇಒ ಭೇಟಿ ನೀಡಿ ಪ್ರವಾಹದಲ್ಲಿ ದೋಣಿಯ ಮೂಲಕ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಮಾದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಹಟ್ಟಿಹೊಳೆ ಸಮೀಪ ಮುಖ್ಯ ರಸ್ತೆ ಮಧ್ಯ ಭಾಗದಲ್ಲಿ ಕುಸಿತಗೊಂಡಿದೆ. ಹೊದವಾಡ ಮತ್ತು ವಾಟೆಕಾಡು ಭಾಗದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರವಾಹಕ್ಕೆ ಸಿಲುಕಿದವರು ಆಶ್ರಯ ಪಡೆದಿದ್ದಾರೆ. ಹೆಬ್ಬಾಲೆ, ಹಾರಂಗಿ ಭಾಗದಲ್ಲಿ ಗದ್ದೆಗಳು ಜಲಾವೃತಗೊಂಡಿವೆ. 

ನಾಪೋಕ್ಲು, ಕೊಟ್ಟಮುಡಿ ರಸ್ತೆ ಸಂಪೂರ್ಣವಾಗಿ ಜಲಮಯವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಗೋಣಿಕೊಪ್ಪದ ನೇತಾಜಿ ಬಡಾವಣೆಯಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಮನೆಗಳು ಜಲಾವೃತಗೊಂಡಿವೆ. ದಕ್ಷಿಣ ಕೊಡಗಿನ ಕುಟ್ಟ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ದುರಸ್ತಿಯಿಂದ ಬಂದ್ ಆಗಿರುವುದರಿಂದ ಪೊನ್ನಂಪೇಟೆಯಲ್ಲಿ ಬಸ್‍ಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂತು.

ಮಡಿಕೇರಿ ನಗರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು. ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಜಿಪಂ ಸಿಇಒ ಭೇಟಿ ನಿಡಿ ಪರಿಶೀಲಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾರೀ ಗಾಳಿಗೆ ಮರವೊಂದು ಧರೆಗುರುಳಿದ್ದು, ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದೆ.

ವೀರಾಜಪೇಟೆ ವೈದ್ಯಕೀಯ ಕಾಲೇಜಿನ ತಡೆಗೋಡೆ ಕುಸಿದು ಮಲೆತಿರಿಕೆ ಬೆಟ್ಟದ ಸಂಚಾರ ಸ್ಥಗಿತ ಗೊಂಡಿತ್ತು. ಪಟ್ಟಣದ ಅರಸು ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಕಲ್ತೋಡು ಶಾಲೆಯಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಅಪಾಯದಲ್ಲಿ ಸಿಲುಕಿರುವವರು ಆಶ್ರಯ ಪಡೆದಿದ್ದಾರೆ. ಬೇಗೂರು ಹಳ್ಳಿಗಟ್ಟು ರಸ್ತೆ ಹಾನಿಗೀಡಾಗಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ.

ದಾಖಲೆ ಮಳೆ: ನಾಪೋಕ್ಲು ಭಾಗದ ನಾಲಡಿಯಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ದಾಖಲೆಯ 22 ಇಂಚು ಮಳೆಯಾಗಿದೆ. ನಿರಂತರವಾಗಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ನಾಪೋಕ್ಲು ಭಾಗದಲ್ಲಿ ಪ್ರವಾಹದ ಪರಿಸ್ಥಿತಿ ತಲೆ ದೋರಿದೆ. 

ಚೆರಿಯಪರಂಬು ಗ್ರಾಮ ಜಲಾವೃತಗೊಂಡಿದ್ದು, 38 ಮಂದಿಯನ್ನು ನಾಪೋಕ್ಲು ಜೂನಿಯರ್ ಕಾಲೇಜು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಭಾಗದ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕಡಿತಗೊಂಡು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತ ಎದುರಾಗಿದೆ.

ಪಾಲೂರು ಶ್ರೀ ಹರಿಶ್ಚಂದ್ರ ದೇಗುಲ ಜಲಾವೃತಗೊಂಡಿದೆ. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ರಸ್ತೆ ಮುಳುಗಡೆಯಾಗಿದೆ. ಅರಸರ ಕಾಲದ ಕಕ್ಕಬ್ಬೆ ಯವಕಪಾಡಿಯ ನಾಲ್ಕುನಾಡು ಅರಮನೆಯ ತಡೆಗೋಡೆ ಕುಸಿದಿದೆ. ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News