ಬಕ್ರೀದ್: ಸುಗಮ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಕ್ರಮ

Update: 2019-08-08 17:54 GMT

ಶಿವಮೊಗ್ಗ, ಆ.8: ಆಗಸ್ಟ್ 12 ರಂದು ಬಕ್ರೀದ್ ಆಚರಿಸುವ ಸಂದರ್ಭದಲ್ಲಿ ಸವಳಂಗ ರಸ್ತೆಯ ಈದ್ಗಾ ಮೈದಾನ ಹಾಗೂ ಮಹಾವೀರ ಸರ್ಕಲ್‍ನಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡಲಿದ್ದಾರೆ. ಈ ರಸ್ತೆಗಳು ಕಿರಿದಾಗಿದ್ದು, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಅನಾನುಕೂಲವಾಗ ಬಹುದಾಗಿರುವುದರಿಂದ ಅಂದು ಒಂದು ದಿನ ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವಾಹನಗಳ ಮಾರ್ಗ ಬದಲಾವಣೆಯ ವಿವರ: ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಕೆ.ಇ.ಬಿ.ಸರ್ಕಲ್ ಕಡೆಗೆ ಬರುವ ಭಾರಿ ವಾಹನಗಳನ್ನು ಶಂಕರಮಠ ರಸ್ತೆ ಮೂಲಕ ಬಿ.ಹೆಚ್.ರಸ್ತೆ ಮೂಲಕ ಬಸ್ಟ್ಯಾಂಡ್‍ಗೆ ಅಥವಾ ಎಂ.ಆರ್.ಎಸ್.ಕಡೆಗೆ ಹೋಗುವುದು. ಕೆ.ಇ.ಬಿ.ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ವಾಹನಗಳು ಟ್ಯಾಂಕ್ ಮೊಹಲ್ಲಾ ರಸ್ತೆ ಮೂಲಕ ಬಿ.ಹೆಚ್.ರಸ್ತೆ ಹಾಗೂ ಬಸವನಗುಡಿ ಕಡೆಯಿಂದ ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವುದು. ಶಿವಮೂರ್ತಿ ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಕುವೆಂಪು ರಸ್ತೆ ಮಾರ್ಗದಲ್ಲಿ ಹಾಗೂ ಬಸವನಗುಡಿ ಕಡೆಗೆ ಹೋಗುವುದು. ಗೋಪಿ ಸರ್ಕಲ್‍ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ವಾಹನಗಳು ದುರ್ಗಿಗುಡಿ ರಸ್ತೆ ಮೂಲಕ ಜೈಲ್ ಸರ್ಕಲ್ ತಲುಪಿ ಕುವೆಂಪು ರಸ್ತೆ ಮೂಲಕ ಸಂಚರಿಸುವುದು.

ಜಿಲ್ಲಾ ಪಂಚಾಯತ್ ಕ್ರಾಸ್ ಕಡೆಯಿಂದ ಬರುವ ವಾಹನಗಳು ತಿಲಕ್‍ನಗರ ಮೂಲಕ ಪಾರ್ಕ್ ಬಡಾವಣೆ ಮೂಲಕ ಗೋಪಿ ಸರ್ಕಲ್‍ಗೆ ಹೋಗುವುದು. ಡಿ.ವಿ.ಎಸ್.ಸರ್ಕಲ್‍ನಿಂದ ಮಹಾವೀರ ಸರ್ಕಲ್‍ಗೆ ಹೋಗುವ ವಾಹನಗಳು ವೀರಶೈವ ಕಲ್ಯಾಣ ಮಂದಿರ ಸರ್ಕಲ್ ಮೂಲಕ ಗೋಪಿ ಸರ್ಕಲ್‍ಗೆ ಹೋಗುವುದು. ಹಾಗೂ ಡಿ.ವಿ.ಎಸ್. ಕಾಲೇಜ್ ಚರ್ಚ್ ರಸ್ತೆ ಮೂಲಕ ಬಿ.ಹೆಚ್.ರಸ್ತೆಗೆ ಹೋಗುವುದು. ರಾಘವೇಂದ್ರ ಮಠ ಸರ್ಕಲ್‍ನಿಂದ ಈದ್ಗಾ ಮೈದಾನದ ಕಡೆಗೆ ಬರುವ ವಾಹನಗಳು ರಾಘವೇಂದ್ರ ಮಠದ ರಸ್ತೆಯ ಮೂಲಕ ಕುವೆಂಪು ರಸ್ತೆಗೆ ಸೇರುವುದು. ಸವಳಂಗ ಕಡೆಯಿಂದ ಬರುವ ಬಸ್‍ಗಳು ಮತ್ತು ಭಾರೀ ವಾಹನಗಳು 100 ಅಡಿ ರಸ್ತೆ ಮೂಲಕ ಆಲ್ಕೋಳ ಸರ್ಕಲ್ ಮುಖಾಂತರವಾಗಿ ಗೋಪಾಳ ಬುದ್ಧನಗರದಿಂದ ಬಸ್ ಸ್ಟ್ಯಾಂಡ್ ಕಡೆಗೆ ಸಂಚರಿಸುವುದು. ಸಾಗರದಿಂದ ಬರುವ ಭಾರಿ ವಾಹನಗಳು ಆಲ್ಕೋಳ ಸರ್ಕಲ್ ಮುಖಾಂತರವಾಗಿ ಗೋಪಾಳ ಬುದ್ಧಾನಗರದಿಂದ ಬಸ್ಟ್ಯಾಂಡ್‍ಗೆ ಸಂಚರಿಸುವುದು. ಬಸ್ಟ್ಯಾಂಡ್‍ನಿಂದ ಹೊರಟು ಸಾಗರ, ಶಿಕಾರಿಪುರ ಕಡೆಗೆ ಹೋಗುವ ಬಸ್‍ಗಳು ಮತ್ತು ಭಾರಿ ವಾಹನಗಳು ಮಿಳ್ಳಘಟ್ಟ ಕ್ರಾಸ್‍ನಿಂದ ಟಿಪ್ಪುನಗರ, ಗೋಪಾಳ ಮಾರ್ಗವಾಗಿ ಆಲ್ಕೊಳ ಸರ್ಕಲ್‍ನಿಂದ ಸಾಗರಕ್ಕೆ ಹೋಗುವುದು.

ಪ್ರಾರ್ಥನೆಗೆ ಬರುವ ವಾಹನಗಳನ್ನು ಕುವೆಂಪು ರಂಗಮಂದಿರದಿಂದ ಡಿವಿಎಸ್ ಸರ್ಕಲ್‍ವರೆಗೆ ಎರಡೂ ಕಡೆಗೆ ದ್ವಿಚಕ್ರ ವಾಹನಗಳ ನಿಲುಗಡೆ, ಕುವೆಂಪು ರಂಗಮಂದಿರದ ಆವರಣದಲ್ಲಿ ನಾಲ್ಕುಚಕ್ರದ ವಾಹನದ ನಿಲುಗಡೆ, ಬಾಲರಾಜ್‍ ಅರಸ್ ರಸ್ತೆ ಕಾಂಗ್ರೇಸ್ ಕಚೇರಿ ಕ್ರಾಸ್‍ನಿಂದ ಗೋಪಿ ಸರ್ಕಲ್‍ವರೆಗೆ ದ್ವಿಚಕ್ರ ವಾಹನಗಳನ್ನು ನಿಲುಗಡೆ, ಬಾಲರಾಜ್ ಅರಸ್ ರಸ್ತೆ ನ್ಯಾಷನಲ್ ಸ್ಕೂಲ್ ಗೇಟ್‍ನಿಂದ ಜಿಲ್ಲಾಧಿಕಾರಿಗಳ ಮನೆ ಕ್ರಾಸ್ ವರೆಗೆ ದ್ವಿಚಕ್ರ ವಾಹನಗಳ ನಿಲುಗಡೆ,  ಶಿವಮೂರ್ತಿ ಸರ್ಕಲ್‍ನಿಂದ ಜಿ.ಪಂ. ಕ್ರಾಸ್‍ವರೆಗೆ ಕುವೆಂಪು ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಹಾಗೂ ಮಿಳಘಟ್ಟ ಕ್ರಾಸ್‍ನಿಂದ ಅಶೋಕನಗರ ಕ್ರಾಸ್‍ವರೆಗೆ ಕಬರ್‍ಸ್ಥಾನದ ಎದುರು ದೊಡ್ಡಪೇಟೆ ಠಾಣೆಯ ಕಡೆಗೆ ವಾಹನಗಳ ನಿಲುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಸಾರ್ವಜನಿಕರು ಈ ವ್ಯವಸ್ಥೆಗೆ ಸೌಹಾರ್ದ ವಾತಾವರಣ ನಿರ್ಮಿಸುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News